ನಮ್ಮ ಮನೆಯಲ್ಲೊಂದು ಬಾವಿಯಿತ್ತು (ಈಗಲೂ ಇದೆ).ಅದರಲ್ಲೊಂದು ಕಪ್ಪೆಯಿತ್ತು. ಒಂದು ಮಳೆಗಾಲದಲ್ಲಿ ಇನ್ನೊಂದು ಕಪ್ಪೆ ಹೇಗೋ ಬಾವಿಯನ್ನು ಸೇರಿಕೊಂಡಿತು. ಆ ಕಪ್ಪೆ, ಈ ಕಪ್ಪೆಗೆ " ಹೊರಗಡೆ ಹಳ್ಳ ಇದೆ. ನದಿ ಇದೆ, ಸಮುದ್ರವಿದೆ. ಇಲ್ಲೇನಿದೆ?ಈ ಬಾವಿಯನ್ನು ಬಿಟ್ಟು ಹೊರತು ಹೋಗೋಣ" ಅಂದಿತಂತೆ . ಈ ಕಪ್ಪೆಯಂತು ಯಾವುದೇ ಮಾತನ್ನು ನಂಬಲು ಸಿದ್ದವಿರಲಿಲ್ಲ. ಅದಕ್ಕೆ ಬಾವಿಯೇ ಎಲ್ಲ ಆಗಿತ್ತು.
ನಾನು ಕೂಡ ಬಾವಿಯೊಳಗಿನ ಕಪ್ಪೆಯೇ ಆಗಿದ್ದೆ. ಮನೆ, ಕಾಲೇಜು ಇಷ್ಟೇ ನನ್ನ ಪ್ರಪಂಚವಾಗಿತ್ತು. ಭಾಷೆ, ದೇಶ, ಸಂಸ್ಕೃತಿ ಹೀಗೆ ಅನೇಕ ಸಂಗತಿಗಳ ಬಗ್ಗೆ ನನ್ನದೇ ಆದ ವಾದಗಳನ್ನು ತಲೆಯಲ್ಲಿ ತುಂಬಿಕೊಂಡು ನನಗೆ ನಾನೆ ಬೇಲಿ ಹಾಕಿಕೊಂಡಿದ್ದೆ.
ನನಗೆ ಬಹಳ ಹಿಂದಿನಿಂದಲೂ ಮಾತೃ ಬಾಷೆಯಾದ ಕನ್ನಡದ ಬಗ್ಗೆ ಮಾತ್ರ ಬಹಳ ಒಲವು. ಅನ್ಯ ಬಾಷೆಯ, ಭಾಷಿಗರ ಬಗ್ಗೆ ಅದೇನೋ ಕೀಳು ಭಾವನೆಯಿತ್ತು. ನಾನು ಮೂಲತಹ ಮಂಗಳೂರಿನವನಾದರೂ ಕಾಲೇಜು ಮುಗಿಯುವ ತನಕ ಕನ್ನಡ, ಇಂಗ್ಲಿಷ್ ಬಿಟ್ಟು ತುಳುನಾಡಿನ ಭಾಷೆಯಾದ ತುಳುವಿನಲ್ಲಿ ವ್ಯವಹರಿಸಿದವನಲ್ಲ. ಆದರೆ ಕಾಲೇಜು ಮುಗಿಸಿ ಮುಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದಾಗ, ಅಲ್ಲೊಂದು ಬಿ ಪಿ ಓ ಕಂಪೆನಿಯಲ್ಲಿ ಮಂಗಳೂರಿಗರ ಟೀಮ್ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರೆಲ್ಲ ಪರಸ್ಪರ ತುಳುವಿನಲ್ಲಿ ಮಾತಾಡುವವರೇ. ನನಗೆ ಅಲ್ಪ ಸ್ವಲ್ಪ ತುಳು ಬರುತಿದ್ದರೂ ತುಳುವಿನಲ್ಲಿ ಮಾತನಾಡುವುದು ಅನಿವಾರ್ಯವಾಯಿತು. ಕೆಲವೇ ದಿನಗಳಲ್ಲಿ ತುಳುವನ್ನು ನಿರರ್ಗಳವಾಗಿ ಆಡುವುದನ್ನು ಕಲಿತೆ. ಕಲಿಯುತಾ ಕಲಿಯುತಾ ಆ ಬಾಷೆಯ ಅಂದವನ್ನು ಆಸ್ವಾದಿಸ ತೊಡಗಿದೆ.
ತುಳುವಿನಂತೆ, ಮಲೆಯಾಳ- ಮಲೆಯಾಳಿಗಳ ಬಗೆಗೂ ನನಗೆ ಅಷ್ಟಕಷ್ಟೇ ಇತ್ತು. ಆದರೆ ತಮ್ಮನು ತರುತಿದ್ದ ಮಲಯಾಳ ಸಿನೆಮಾಗಳ ಸಿಡಿ- ಡಿವಿಡಿ ಗಳನ್ನೂ ನೋಡಿದ ನನಗೆ ಆ ಭಾಷೆ- ಭಾಷಿಗರ ಮೇಲಿದ್ದ ಭಾವನೆಗಳು ಬದಲಾದದ್ದು ಸುಳ್ಳಲ್ಲ. ಸಿನೆಮಾ ತಯಾರಿ, ಕಠಿಣ ದುಡಿಮೆ ಹೀಗೆ ಅನೇಕ ವಿಚಾರಗಳನ್ನು ಅವರಿಂದ ನಾವು ಕಲಿಯುವುದು ಬಹಳಷ್ಟಿದೆ. ಈಗ ನನಗೆ ಹಲವರು ಮಲಯಾಳಿ ಗೆಳೆಯರಿದ್ದಾರೆ. ವಾರಕ್ಕೆ ಒಂದಾದರೂ ಮಲಯಾಳ ಸಿನೆಮಾವನ್ನು ನೋಡಿ ಆನಂದಿಸುತಿದ್ದೇನೆ.
ನಮ್ಮ ಬ್ಯಾಂಕಿಗೆ ಪ್ರತಿನಿತ್ಯ ಹಲವರು ಗ್ರಾಹಕರು ಬರುತಿರುತ್ತಾರೆ. ಅವರಲ್ಲಿ ಹಲವರು ಕೃಷಿಕರು. ಇವರಲ್ಲಿ ಅನಕ್ಷರಸ್ತರ ದಂಡೇ ಜಾಸ್ತಿ. ಆದರೆ ಅವರಿಂದ ಸಿಗುವ ಜೀವನ ಪಾಠಗಳು ಯಾವ ವಿಶ್ವವಿದ್ಯಾನಿಲಯದ ಪ್ರಾಧ್ಯಪಕರುಗಳಿಂದಲೂ ಸಿಗಲು ಸಾದ್ಯವಿಲ್ಲ. ಆದರೆ ಕೇಳುವ ತಾಳ್ಮೆ ನಮಗಿರಬೇಕು ಅಷ್ಟೇ. ವೇದಗಳೇ ಹೇಳುವಂತೆ ಜ್ಞಾನ ಮೂಲಗಳು, ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅದನ್ನು ನಾವು ಸ್ವಾಗತಿಸಬೇಕು.
ಜಗತ್ತು ಬೆಳೆಯುತ್ತಿರುವಂತೆ ನಮ್ಮ ಜ್ಞಾನ ನಿಧಿಯನ್ನು ಹಿರಿದುಗೊಳಿಸುವಂತಹ ಅವಕಾಶಗಳೂ ಹೆಚ್ಚುತ್ತಿವೆ. ಆದರೆ ನಾವಿಂದು ಕನ್ನುಗಲಿದ್ದೂ ಕುರುಡರಾಗಿದ್ದೇವೆ, ಕಿವಿಗಳಿದ್ದೂ ಕಿವುಡರಾಗಿದ್ದೇವೆ, ಮಾತುಗಳನ್ನಾಡುವ ಮೂಕರಾಗಿದ್ದೇವೆ.ನಮ್ಮ ಈ ವರ್ತನೆಯಿಂದ ಯಾರಿಗೇನೂ ನಷ್ಟವಿಲ್ಲ. ಇದು ನಮ್ಮ ಬೆಳವಣಿಗೆಗಷ್ಟೇ ಮಾರಕ.
ಯಾವುದೋ ಕಪೋಕಲ್ಪಿತ ಭಾವನೆ, ಕೀಳರಿಮೆ ಜೊತೆಗೆ ಅರಿಷಡ್ವರ್ಗಗಳ ಏಳು ಸುತ್ತಿನ ಕೋಟೆಯನ್ನು ಕಟ್ಟಿಕೊಂಡು ನಾವಿಂದು ನರಳುತಿದ್ದೇವೆ. ಇದಕ್ಕೆಲ್ಲೇ ಕಾರಣ ಅಜ್ಞಾನ.ಅದಕ್ಕೆ ಹಿರಿಯರು,' ಕೋಶ ಓದಿ, ದೇಶ ಸುತ್ತಿ' ಅಂದಿರಬೇಕು.ಯಾರೋ ಹೇಳಿದಂತೆ, " ತಿಳಿದಿರುವುದು ಬರೀ ಹನಿಯಷ್ಟೇ, ತಿಳಿಯದಿರುವುದು ಸಮುದ್ರ.." ಹುಡುಕಿದರೆ ಸಮುದ್ರಕ್ಕಿಂತಲೂ ವಿಶಾಲವಾದ ಇನ್ನೇನಾದರೂ ಸಿಗುವ ಸಾಧ್ಯತೆಯೂ ಇದೆ. ಏನೇ ಇರಲಿ, ನಾನಂತೂ ಬಾವಿಯಿಂದ ಹಾರಿ ಹೊಳೆಯನ್ನು ಸೇರಿದ್ದೇನೆ. ನದಿ, ಸಮುದ್ರ, ಸಾಗರವನ್ನು ಸೇರುವ ಪ್ರಯತ್ನವನ್ನೂ ಮಾಡುತಿದ್ದೇನೆ.........
No comments:
Post a Comment