Monday, 16 May 2011

ಹೋದವರು ಒಳ್ಳೆಯವರು...........

ಅಲ್ಲಿ ಯಾರೋ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರಂತೆ. ಬದುಕಿರುವಾಗ ಬಂದು ನೋಡದ ಕುಟುಂಬದವರ,ಗೆಳೆಯರ ದಂಡೇ ಅಲ್ಲಿ ಸೇರಿತ್ತು.ಅವರೆಲ್ಲ ಹೇಳುತಿತ್ತದ್ದು ಇಷ್ಟೇ "ಎಷ್ಟು ಒಳ್ಳೆಯ ಮನುಷ್ಯ ..ನಮ್ಮಲ್ಲಿ ಸಹಾಯ ಕೇಳುತಿದ್ದರೆ ಮಾಡುತ್ತಿರಲಿಲ್ಲವೇ?" ಜೀವಂತವಿರುವಾಗ ಇವರೆಲ್ಲ ಒಂದು ಪೈಸ ಕೊಟ್ಟವರಲ್ಲ.

ಇಲ್ಲಿ ಯಾರೋ ಒಬ್ಬ ರೈತ ಸತ್ತುಬಿದ್ದಿದ್ದನಂತೆ.ಬದುಕಿರುವಾಗ ಊರವರಿಗೆಲ್ಲ ಕಾಟ ಕೊಡುತಿದ್ದನಂತೆ. ಅವನ ಮನೆಗೆ ಹೋದ ಜನರೂ ಅವನನ್ನು ಹೊಗಳಿದ್ದೇ ಹೊಗಳಿದ್ದು. ಒಬ್ಬನಂತೂ ಇನ್ನೂ ಮುಂದೆ ಹೋಗಿ ಅವನ ಸಹಜ ಸಾವನ್ನು ಆತ್ಮಹತ್ಯೆ  ಮಾಡಲು ಹೊರಟಿದ್ದ. ಅವನು ಹೇಳಿದ್ದಿಷ್ಟೇ.."ರೈತರ ಕಷ್ಟ ನೋಡಲಾರದೆ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.." ಸತ್ತಮೇಲೆ ಅವನನ್ನು ದೊಡ್ಡ ರೈತ ನಾಯಕನಾಗಿ ಮಾಡಲು ಹೊರಟಂತಿತ್ತು ಅವನ ಮಾತು. 

ಮೊನ್ನೆ ಒಬ್ಬ ಪ್ರಮುಖ ಹಾಗು ನಿಷ್ಟಾವಂತ  ರಾಜಕಾರಣಿಯೊಬ್ಬರು ಮರಣಿಸಿದರು. ಅವರ ಪಾರ್ಥಿವ ಶರೀರ ದರ್ಶನ ಮಾಡಲು ಇತರ ಹಲವರು ರಾಜಕಾರಣಿಗಳು ಬಂದಿದ್ದರು. ಹಲವರು ಪರಸ್ಪರ ಕತ್ತಿ ಮಸೆಯುತ್ತಿದ್ದವರೇ ... ಸಾರ್ವಜನಿಕವಾಗಿ ಕಿತ್ತಾಟ ನಡೆಸಿದವರೇ.. ಅದರೂ ಮಾಧ್ಯಮದ ಮುಂದೆ ಅವರು ಹೇಳಿದ್ದು ಬರಿ ಇಷ್ಟೇ.." ನಾವಿಂದು ಒಬ್ಬ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ರಾಜಕಾರಣದಲ್ಲಿ ಅವರು ನಮಗೆ ಮಾರ್ಗದರ್ಶಕರಾಗಿದ್ದರು.ಅವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟ "

ಇತ್ತೀಚೆಗಷ್ಟೇ ನಮ್ಮ ಒಬಾಮರು, ಒಸಾಮನನ್ನು ಕೊಲ್ಲಿಸಿದರು...ಜಗತ್ತಿಗೇ ತಮ್ಮ ಶಕ್ತಿ ತೋರಿಸಿದರು. ಅವನ ಹೆಣವನ್ನು ಸಮುದ್ರದಲ್ಲಿ ಸಮಾಧಿಗೊಳಿಸಿದರು. ಈ ದುಷ್ಟನ ಸಮಾಧಿ ಧಾರ್ಮಿಕ  ಕ್ಷೇತ್ರ ಅಗಬಾರದೆಮ್ಬುದೆ ಅವರ ಗುರಿಯಾಗಿತ್ತು.  ಅದರೂ ಪವಿತ್ರ ಇಸ್ಲಾಮಿನಲ್ಲಿ ಭೌತಿಕ ಶರೀರವಿಲ್ಲದ ಸಮಾಧಿಗೂ ಸ್ಥಾನವಿದೆಯೆಂದು ಸಬೂಬು ಹೇಳಿ ಅವನ ಗೋರಿ ಕಟ್ಟಲು ಹಲವರು ಮುಂದಾಗಿದ್ದಾರೆ. ಅದೆಷ್ಟೋ ಮುಗ್ಧ ಜೀವಗಳನ್ನು ಬಲಿತೆಗೆದ ಅವನನ್ನು ಇಸ್ಲಾಮಿನ ರಕ್ಷಕನೆಂದು ಕೊಂಡಾಡಿ, ಅದೇ ಪಾಕಿಸ್ತಾನದ  ಅಸ್ಸೆಂಬ್ಲಿನಲ್ಲಿ ಕೆಲವರು  ಶಾಂತಿಕೊರಿದ್ದೂ ಆಯಿತು. 

ಗಂಡ ಹೆಂಡತಿಯರ ಜಗಳ ಉಂಡು ಮಲಗುವ ತನಕವಂತೆ.ಅದೇ ಗಂಡನನ್ನು ಇಡೀ ದಿನ ಹಾಗೇ ಉಂಡು ಮಲಗಿದ ನಂತರವೂ ದೂಷಿಸಿದ ಹೆಂಡತಿ, ಆತ ಸತ್ತ ಬಳಿಕ ವಿಮೆಯ ಹಣ ಸಿಗುವಾಗ "ಹೇಗೆ ಇರಲಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದ. ಬಿಟ್ಟು ಹೋಗೆ ಬಿಟ್ಟನಲ್ಲ" ಎಂದು ಗಂಡನ ಫೋಟೋದ ಅದುರು ಊದಿನ ಕಡ್ಡಿಯನ್ನು ಹಚ್ಚಿ ಅಳುತಾಳಂತೆ..   

ಹೀಗೆ ಬದುಕಿರುವಾಗ ಹೇಗೆ ಇರಲಿ ಸತ್ತ ಮೇಲಂತೂ ಅತ್ಯುನ್ನತ ಸ್ಥಾನವನ್ನು ನೀಡುವುದು ನಮ್ಮ ವಾಡಿಕೆ.ಯಾವುದೇ ದೇಹದೊಂದಿಗಿದ್ದ  ಆತ್ಮದಿಂದ ನಮಗೆ ಉಪಕರವಾಗಿರಲಿ ಯಾ ಅತೀವ ತೊಂದರೆಯಾಗಿರಲಿ, ದೇಹ ತೊರೆದ ಕೂಡಲೇ  ಆ ಆತ್ಮಕ್ಕೆ ಪವಿತ್ರತೆ ಬಂದು ಬಿಡುತ್ತದೆ. ಈ ಚಿಂತನೆ ಭಾರತದಿಂದಲೇ ಆರಂಭಗೊಂಡಿರಬೇಕು. ನಮ್ಮಲ್ಲಿ ಉಗ್ರ ಖೈದಿಗೆ ಮರಣದಂಡನೆಯನ್ನು ನೀಡುವ ಸಮಯದಲ್ಲೂ ಸಹ ಪವಿತ್ರ ಸ್ನಾನವನ್ನು ಮಾಡಿಸಿ, ಪವಿತ್ರ ಗ್ರಂಥಗಳ ಪಟನವನ್ನು ಮಾಡಲಾಗುತ್ತದೆ.  ನಾವಿಂದು ಪೂಜಿಸುವ ಹಲವು ಸಾಧು ಸಂತರು, ದಾಸ ಶ್ರೇಷ್ಟರು ಬದುಕಿರುವಾಗ ನಮ್ಮಿಂದ ಧೂಷನೆಗೊಳಗಾದವರೇ. 

ಬದುಕಿದ್ದಾಗ ನಾವು ಒಬ್ಬರಿಗೂ ಸಹಾಯ ಮಾಡುವುದಿಲ್ಲ. ಅವರ ಉತ್ತಮ ಕೆಲಸಗಳನ್ನು ಹೊಗಳುವುದಿಲ್ಲ. ಅನೇಕರ ಸಾವಿಗೆ ಪ್ರತ್ಯಕ್ಷ ಯಾ ಪರೋಕ್ಷವಾಗಿ ನಾವೇ ಹೊಣೆಯಾಗುತ್ತೇವೆ. ಇದೆ ರೀತಿ ಕೆಟ್ಟವರನ್ನು ಒಳ್ಳೆಯವರನ್ನಾಗಿಸಲು ಪ್ರಯತ್ನಿಸುವುದಿಲ್ಲ. ಅವರಿಗೆ ಇನ್ನೂ ಪಬ್ಲಿಸಿಟಿ ಕೊಡಿಸಿ ಜನ ಇನ್ನೂ ಭಯಪಡುವಂತೆ ಮಾಡುತ್ತೇವೆ. ಕೆಟ್ಟವರಾದ  ಅಂಗುಲಿಮಾಲ, ಚಂಡ ಅಶೋಕರಂತವರೆ ಉತ್ತಮರಾದ ದೇಶ ನಮ್ಮದು.               

ಮರಣವೆಂಬ ನಿತ್ಯ ಸತ್ಯದ ಮೊದಲು ಮತ್ತು ಬಳಿಕದ ಜೀವನದ ಬಗ್ಗೆ ಬರೆಯಲು ಹೊರಟಿಲ್ಲ. ಆದರೂ 'ನಮ್ಮವರ' ಸ್ವಭಾವನ್ನು ನೋಡಿ ಹೇಳಬಯಸುವುದ್ದಿಷ್ಟೇ.. ಹೋದವರೇ ಒಳ್ಳೆಯವರು.. ನಾವೇ ಬರೀ ಕೆಟ್ಟವರು ...........

No comments:

Post a Comment