Monday, 23 May 2011

ಬಾವಿಯೊಳಗಿನ ಕಪ್ಪೆಗಳು...............

ನಮ್ಮ ಮನೆಯಲ್ಲೊಂದು ಬಾವಿಯಿತ್ತು (ಈಗಲೂ ಇದೆ).ಅದರಲ್ಲೊಂದು ಕಪ್ಪೆಯಿತ್ತು. ಒಂದು ಮಳೆಗಾಲದಲ್ಲಿ ಇನ್ನೊಂದು ಕಪ್ಪೆ ಹೇಗೋ  ಬಾವಿಯನ್ನು ಸೇರಿಕೊಂಡಿತು. ಆ ಕಪ್ಪೆ, ಈ ಕಪ್ಪೆಗೆ " ಹೊರಗಡೆ ಹಳ್ಳ ಇದೆ. ನದಿ ಇದೆ, ಸಮುದ್ರವಿದೆ. ಇಲ್ಲೇನಿದೆ?ಈ ಬಾವಿಯನ್ನು ಬಿಟ್ಟು ಹೊರತು ಹೋಗೋಣ" ಅಂದಿತಂತೆ . ಈ ಕಪ್ಪೆಯಂತು ಯಾವುದೇ ಮಾತನ್ನು ನಂಬಲು ಸಿದ್ದವಿರಲಿಲ್ಲ. ಅದಕ್ಕೆ ಬಾವಿಯೇ ಎಲ್ಲ ಆಗಿತ್ತು.

ನಾನು ಕೂಡ ಬಾವಿಯೊಳಗಿನ ಕಪ್ಪೆಯೇ ಆಗಿದ್ದೆ. ಮನೆ, ಕಾಲೇಜು ಇಷ್ಟೇ ನನ್ನ ಪ್ರಪಂಚವಾಗಿತ್ತು. ಭಾಷೆ, ದೇಶ, ಸಂಸ್ಕೃತಿ ಹೀಗೆ ಅನೇಕ ಸಂಗತಿಗಳ ಬಗ್ಗೆ ನನ್ನದೇ ಆದ ವಾದಗಳನ್ನು ತಲೆಯಲ್ಲಿ ತುಂಬಿಕೊಂಡು ನನಗೆ ನಾನೆ ಬೇಲಿ ಹಾಕಿಕೊಂಡಿದ್ದೆ.

ನನಗೆ ಬಹಳ ಹಿಂದಿನಿಂದಲೂ ಮಾತೃ ಬಾಷೆಯಾದ ಕನ್ನಡದ ಬಗ್ಗೆ ಮಾತ್ರ ಬಹಳ ಒಲವು. ಅನ್ಯ ಬಾಷೆಯ, ಭಾಷಿಗರ ಬಗ್ಗೆ ಅದೇನೋ ಕೀಳು ಭಾವನೆಯಿತ್ತು. ನಾನು ಮೂಲತಹ ಮಂಗಳೂರಿನವನಾದರೂ ಕಾಲೇಜು ಮುಗಿಯುವ ತನಕ ಕನ್ನಡ, ಇಂಗ್ಲಿಷ್ ಬಿಟ್ಟು ತುಳುನಾಡಿನ ಭಾಷೆಯಾದ ತುಳುವಿನಲ್ಲಿ ವ್ಯವಹರಿಸಿದವನಲ್ಲ. ಆದರೆ ಕಾಲೇಜು ಮುಗಿಸಿ ಮುಂದೆ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋದಾಗ, ಅಲ್ಲೊಂದು ಬಿ ಪಿ ಓ  ಕಂಪೆನಿಯಲ್ಲಿ ಮಂಗಳೂರಿಗರ ಟೀಮ್ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರೆಲ್ಲ ಪರಸ್ಪರ ತುಳುವಿನಲ್ಲಿ ಮಾತಾಡುವವರೇ. ನನಗೆ ಅಲ್ಪ ಸ್ವಲ್ಪ ತುಳು ಬರುತಿದ್ದರೂ ತುಳುವಿನಲ್ಲಿ ಮಾತನಾಡುವುದು ಅನಿವಾರ್ಯವಾಯಿತು. ಕೆಲವೇ ದಿನಗಳಲ್ಲಿ ತುಳುವನ್ನು ನಿರರ್ಗಳವಾಗಿ ಆಡುವುದನ್ನು ಕಲಿತೆ. ಕಲಿಯುತಾ ಕಲಿಯುತಾ ಆ ಬಾಷೆಯ ಅಂದವನ್ನು ಆಸ್ವಾದಿಸ ತೊಡಗಿದೆ.

ತುಳುವಿನಂತೆ, ಮಲೆಯಾಳ- ಮಲೆಯಾಳಿಗಳ ಬಗೆಗೂ ನನಗೆ ಅಷ್ಟಕಷ್ಟೇ ಇತ್ತು. ಆದರೆ ತಮ್ಮನು ತರುತಿದ್ದ ಮಲಯಾಳ ಸಿನೆಮಾಗಳ ಸಿಡಿ- ಡಿವಿಡಿ ಗಳನ್ನೂ ನೋಡಿದ ನನಗೆ ಆ ಭಾಷೆ- ಭಾಷಿಗರ ಮೇಲಿದ್ದ ಭಾವನೆಗಳು ಬದಲಾದದ್ದು ಸುಳ್ಳಲ್ಲ. ಸಿನೆಮಾ ತಯಾರಿ, ಕಠಿಣ ದುಡಿಮೆ ಹೀಗೆ ಅನೇಕ ವಿಚಾರಗಳನ್ನು ಅವರಿಂದ ನಾವು ಕಲಿಯುವುದು ಬಹಳಷ್ಟಿದೆ. ಈಗ ನನಗೆ ಹಲವರು ಮಲಯಾಳಿ ಗೆಳೆಯರಿದ್ದಾರೆ. ವಾರಕ್ಕೆ ಒಂದಾದರೂ ಮಲಯಾಳ ಸಿನೆಮಾವನ್ನು ನೋಡಿ ಆನಂದಿಸುತಿದ್ದೇನೆ.  

ನಮ್ಮ ಬ್ಯಾಂಕಿಗೆ ಪ್ರತಿನಿತ್ಯ ಹಲವರು ಗ್ರಾಹಕರು ಬರುತಿರುತ್ತಾರೆ. ಅವರಲ್ಲಿ ಹಲವರು ಕೃಷಿಕರು. ಇವರಲ್ಲಿ ಅನಕ್ಷರಸ್ತರ ದಂಡೇ ಜಾಸ್ತಿ. ಆದರೆ ಅವರಿಂದ ಸಿಗುವ ಜೀವನ ಪಾಠಗಳು ಯಾವ ವಿಶ್ವವಿದ್ಯಾನಿಲಯದ ಪ್ರಾಧ್ಯಪಕರುಗಳಿಂದಲೂ ಸಿಗಲು ಸಾದ್ಯವಿಲ್ಲ. ಆದರೆ ಕೇಳುವ ತಾಳ್ಮೆ ನಮಗಿರಬೇಕು ಅಷ್ಟೇ. ವೇದಗಳೇ ಹೇಳುವಂತೆ ಜ್ಞಾನ ಮೂಲಗಳು, ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅದನ್ನು ನಾವು ಸ್ವಾಗತಿಸಬೇಕು.

ಜಗತ್ತು ಬೆಳೆಯುತ್ತಿರುವಂತೆ ನಮ್ಮ ಜ್ಞಾನ ನಿಧಿಯನ್ನು ಹಿರಿದುಗೊಳಿಸುವಂತಹ ಅವಕಾಶಗಳೂ ಹೆಚ್ಚುತ್ತಿವೆ. ಆದರೆ ನಾವಿಂದು ಕನ್ನುಗಲಿದ್ದೂ ಕುರುಡರಾಗಿದ್ದೇವೆ, ಕಿವಿಗಳಿದ್ದೂ ಕಿವುಡರಾಗಿದ್ದೇವೆ, ಮಾತುಗಳನ್ನಾಡುವ ಮೂಕರಾಗಿದ್ದೇವೆ.ನಮ್ಮ ಈ ವರ್ತನೆಯಿಂದ ಯಾರಿಗೇನೂ ನಷ್ಟವಿಲ್ಲ. ಇದು ನಮ್ಮ ಬೆಳವಣಿಗೆಗಷ್ಟೇ ಮಾರಕ. 

ಯಾವುದೋ ಕಪೋಕಲ್ಪಿತ ಭಾವನೆ, ಕೀಳರಿಮೆ ಜೊತೆಗೆ ಅರಿಷಡ್ವರ್ಗಗಳ ಏಳು  ಸುತ್ತಿನ ಕೋಟೆಯನ್ನು ಕಟ್ಟಿಕೊಂಡು ನಾವಿಂದು ನರಳುತಿದ್ದೇವೆ. ಇದಕ್ಕೆಲ್ಲೇ ಕಾರಣ ಅಜ್ಞಾನ.ಅದಕ್ಕೆ ಹಿರಿಯರು,' ಕೋಶ ಓದಿ, ದೇಶ ಸುತ್ತಿ' ಅಂದಿರಬೇಕು.ಯಾರೋ ಹೇಳಿದಂತೆ, " ತಿಳಿದಿರುವುದು ಬರೀ ಹನಿಯಷ್ಟೇ, ತಿಳಿಯದಿರುವುದು ಸಮುದ್ರ.." ಹುಡುಕಿದರೆ ಸಮುದ್ರಕ್ಕಿಂತಲೂ ವಿಶಾಲವಾದ ಇನ್ನೇನಾದರೂ ಸಿಗುವ ಸಾಧ್ಯತೆಯೂ ಇದೆ. ಏನೇ ಇರಲಿ, ನಾನಂತೂ ಬಾವಿಯಿಂದ ಹಾರಿ ಹೊಳೆಯನ್ನು ಸೇರಿದ್ದೇನೆ. ನದಿ, ಸಮುದ್ರ, ಸಾಗರವನ್ನು ಸೇರುವ ಪ್ರಯತ್ನವನ್ನೂ ಮಾಡುತಿದ್ದೇನೆ......... 

Tuesday, 17 May 2011

ಯಡಿಯೂರಪ್ಪ v/s ಭಾರದ್ವಾಜ್

 ಅದೇ ಸೀರಿಯಲು, ರಿಯಾಲಿಟಿ ಷೋ, ಕ್ರಿಕೆಟ್ ನೋಡಿದ ಕರ್ನಾಟಕದ ಜನತೆಗೆ ಬಹಳ ಬೇಜಾರು ಬಂದಿತ್ತು. ಆದರೆ ಬಾರಧ್ವಜರ ಆಗಮನದಿಂದ ಪ್ರತಿ ದಿನವೂ ಮನರಂಜನೆ ಸಿಗುತ್ತಾ ಇದೆ. ಈಗ ಗಲ್ಲಿ ಗಲ್ಲಿಗಳಲ್ಲೂ ಕರ್ನಾಟಕದ ರಾಜಕೀಯದ ಬಗ್ಗೆನೇ ಮಾತುಕತೆ.

ಮಾನ್ಯ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ಪ್ರಯತ್ನಿಸಿತಿದ್ದರೆ, ರಾಜ್ಯಪಾಲರನ್ನೇ ಓಡಿಸುವ ತುರಾತುರಿಯಲ್ಲಿ ಬಿ ಜೆ ಪಿ ಪಾಳಯವಿದೆ. ರಾಜ್ಯಪಾಲರು ಕಾಂಗ್ರೆಸ್ಸಿನ ಏಜೆಂಟ್ ಎಂದು ಯಡಿಯೂರಪ್ಪನವರು ಹೇಳುತಿದ್ದರೆ, ಯಡಿಯೂರಪ್ಪನವರಿಗೆ ನೈತಿಕವಾಗಿ ಆಡಳಿತ ನಡೆಸುವ ಹಕ್ಕಿಲ್ಲ್ಲವೆನ್ನುವುದು ರಾಜ್ಯಪಾಲರ ವಾದ

ಯಡಿಯೂರಪ್ಪನವರು ನಿಜವಾಗಿಯೂ ಧೋಷಿಯಾಗಿದ್ದರೆ,ರಾಜ್ಯದ ಕಾನೂನು ಕಟ್ಟಲೆಗಳು ಏನು ಮಾಡುತ್ತಿವೆ?  ವಿರೋಧ ಪಕ್ಷದವರು ಏನೆಲ್ಲ ಮಸಿ ಬಳಿದರೂ, ಬಿ ಜೆ ಪಿ ಯನ್ನೇ ಮತ್ತೆ ಮತ್ತೆ ಗೆಲ್ಲಿಸುವ ಪ್ರಜೆಗಳು ಮೂರ್ಖರೆ? ಏನೇ ಇರಲಿ ಕರ್ನಾಟಕದಲ್ಲಿ ರಾಜಕೀಯವೆಂಬ ಟಿ-ಟ್ವೆಂಟಿ ಮ್ಯಾಚು ನಡೆಯಿತ್ತಿದೆ.

ಮಣ್ಣ್ಹಿನ  ಮಗನಾದ ದೇವೇಗೌಡರು ಈಗಾಗಲೇ ಪಿಚ್ಚನ್ನು ಸಿದ್ಧಗೊಳಿಸಿದ್ದಾರೆ. ಯಡಿಯೂರಪ್ಪ v/s  ಭಾರದ್ವಾಜ್ ರ ಅಭ್ಯಾಸ ಪಂದ್ಯವಂತು ಈಗಾಗಲೇ ಮುಗಿದಿದೆ.ಇನ್ನೇನಿದ್ದರೂ ಹೊಡಿ ಬಡಿ ಆಟವಷ್ಟೇ.

ಮಾನ್ಯ ರಾಜ್ಯಪಾಲರೇ, ಉತ್ತಮ ಕೋಚನ್ನು ಆರಿಸಿರಿ. ಗೂಗ್ಲಿ ಮುಂತಾದ ಉತ್ತಮ ಎಸೆತಗಳನ್ನು ಎಸೆಯಿರಿ. ವೈಡ್, ನೋ ಬಾಲಂತೂ  ಬೇಡವೇ ಬೇಡ.

ಮಾನ್ಯ ಮುಖ್ಯಮಂತ್ರಿಗಳೇ, ನೀವು ಇನ್ನೂ ಉತ್ತಮ ಕೋಚಿನ ಮೊರೆ ಹೋಗಿ. ಉತ್ತಮವಾದ ಹೊಡೆತವನ್ನು ನೀಡಿರಿ. ಹೊಸ ಹೊಸ ಹೊಡೆತಗಳನ್ನು ಅವಿಷ್ಕರಿಸಿರಿ. ಐ ಪಿ ಎಲ್ ನ ಹೊಸ ಶಾಟ್, ಎಸೆತಗಳಿಗೆ ಅಫಿಷ್ಯಲ್ ಪಾರ್ಟ್ನರ್ಗಳು ಇರುವಂತೆ, ನೀವೂ ನಿಮ್ಮ ಪಾರ್ಟ್ನರ್ಗಳನ್ನು ಹುಡುಕಿರಿ.ಅನೇಕ ಟೀ ವಿ  ಚಾನೆಲ್ ಗಳು ಇದ್ದರೂ ಐ ಪಿ ಎಲ್ ಮ್ಯಾಚುಗಳು ಒಂದೇ ಚಾನೆಲ್ ನಲ್ಲಿ ಪ್ರಸಾರಗೊಳ್ಳುವಂತೆ   ನಿಮ್ಮ ಮ್ಯಾಚಿನ ಕಾಪಿ ರೈಟನ್ನು ಯಾವುದಾದರು ಚಾನೆಲ್ ಗೆ ನೀಡಿ.

ಏನೇ ಮಾಡಿ, ಎಷ್ಟೇ ಮ್ಯಾಚನ್ನು ಆಡಿ ಆಟವಂತು ತುಂಬಾ ಫೈಟ್ ಆಗಿರಬೇಕು.ಗೆದ್ದವರಿಗೆ ಸರಕಾರ ನಡೆಸುವ ಅವಕಾಶ. ಉತ್ತಮ  ಪ್ರದರ್ಶನ ನೀಡಿದರೂ ಸೋತ ತಂಡಗಳ ಸದಸ್ಯರುಗಳಿಗೆ "ಮ್ಯಾನ್ ಆಫ್ ದ ಮ್ಯಾಚ್" ಯಾ "ಮ್ಯಾನ್ ಆಫ್ ದ ಸೀರಿಸ್" ನೀಡಲಾಗುವುದಿಲ್ಲ .ಅದೇನಿದ್ದರೂ ಗೆದ್ದ ತಂಡಗಳಿಗೆ ಸೀಮಿತ.ನಮ್ಮವರು, ತಮ್ಮವರು ಎಂಬ ಯೋಚನೆಯನ್ನು ಬಿಡಿ. ಗೆಲ್ಲುವುದಷ್ಟೇ ತಮ್ಮ ಗುರಿಯಗಿರಲಿ. ಇನ್ನೂ ಉತ್ತಮ ಮನರಂಜನೆಯನ್ನು ನೀಡಿ.

ಉಭಯ ತಂಡಗಳಿಗೂ ಆಲ್ ದಿ ಬೆಸ್ಟ್........   



Monday, 16 May 2011

ಹೋದವರು ಒಳ್ಳೆಯವರು...........

ಅಲ್ಲಿ ಯಾರೋ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರಂತೆ. ಬದುಕಿರುವಾಗ ಬಂದು ನೋಡದ ಕುಟುಂಬದವರ,ಗೆಳೆಯರ ದಂಡೇ ಅಲ್ಲಿ ಸೇರಿತ್ತು.ಅವರೆಲ್ಲ ಹೇಳುತಿತ್ತದ್ದು ಇಷ್ಟೇ "ಎಷ್ಟು ಒಳ್ಳೆಯ ಮನುಷ್ಯ ..ನಮ್ಮಲ್ಲಿ ಸಹಾಯ ಕೇಳುತಿದ್ದರೆ ಮಾಡುತ್ತಿರಲಿಲ್ಲವೇ?" ಜೀವಂತವಿರುವಾಗ ಇವರೆಲ್ಲ ಒಂದು ಪೈಸ ಕೊಟ್ಟವರಲ್ಲ.

ಇಲ್ಲಿ ಯಾರೋ ಒಬ್ಬ ರೈತ ಸತ್ತುಬಿದ್ದಿದ್ದನಂತೆ.ಬದುಕಿರುವಾಗ ಊರವರಿಗೆಲ್ಲ ಕಾಟ ಕೊಡುತಿದ್ದನಂತೆ. ಅವನ ಮನೆಗೆ ಹೋದ ಜನರೂ ಅವನನ್ನು ಹೊಗಳಿದ್ದೇ ಹೊಗಳಿದ್ದು. ಒಬ್ಬನಂತೂ ಇನ್ನೂ ಮುಂದೆ ಹೋಗಿ ಅವನ ಸಹಜ ಸಾವನ್ನು ಆತ್ಮಹತ್ಯೆ  ಮಾಡಲು ಹೊರಟಿದ್ದ. ಅವನು ಹೇಳಿದ್ದಿಷ್ಟೇ.."ರೈತರ ಕಷ್ಟ ನೋಡಲಾರದೆ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.." ಸತ್ತಮೇಲೆ ಅವನನ್ನು ದೊಡ್ಡ ರೈತ ನಾಯಕನಾಗಿ ಮಾಡಲು ಹೊರಟಂತಿತ್ತು ಅವನ ಮಾತು. 

ಮೊನ್ನೆ ಒಬ್ಬ ಪ್ರಮುಖ ಹಾಗು ನಿಷ್ಟಾವಂತ  ರಾಜಕಾರಣಿಯೊಬ್ಬರು ಮರಣಿಸಿದರು. ಅವರ ಪಾರ್ಥಿವ ಶರೀರ ದರ್ಶನ ಮಾಡಲು ಇತರ ಹಲವರು ರಾಜಕಾರಣಿಗಳು ಬಂದಿದ್ದರು. ಹಲವರು ಪರಸ್ಪರ ಕತ್ತಿ ಮಸೆಯುತ್ತಿದ್ದವರೇ ... ಸಾರ್ವಜನಿಕವಾಗಿ ಕಿತ್ತಾಟ ನಡೆಸಿದವರೇ.. ಅದರೂ ಮಾಧ್ಯಮದ ಮುಂದೆ ಅವರು ಹೇಳಿದ್ದು ಬರಿ ಇಷ್ಟೇ.." ನಾವಿಂದು ಒಬ್ಬ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ರಾಜಕಾರಣದಲ್ಲಿ ಅವರು ನಮಗೆ ಮಾರ್ಗದರ್ಶಕರಾಗಿದ್ದರು.ಅವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟ "

ಇತ್ತೀಚೆಗಷ್ಟೇ ನಮ್ಮ ಒಬಾಮರು, ಒಸಾಮನನ್ನು ಕೊಲ್ಲಿಸಿದರು...ಜಗತ್ತಿಗೇ ತಮ್ಮ ಶಕ್ತಿ ತೋರಿಸಿದರು. ಅವನ ಹೆಣವನ್ನು ಸಮುದ್ರದಲ್ಲಿ ಸಮಾಧಿಗೊಳಿಸಿದರು. ಈ ದುಷ್ಟನ ಸಮಾಧಿ ಧಾರ್ಮಿಕ  ಕ್ಷೇತ್ರ ಅಗಬಾರದೆಮ್ಬುದೆ ಅವರ ಗುರಿಯಾಗಿತ್ತು.  ಅದರೂ ಪವಿತ್ರ ಇಸ್ಲಾಮಿನಲ್ಲಿ ಭೌತಿಕ ಶರೀರವಿಲ್ಲದ ಸಮಾಧಿಗೂ ಸ್ಥಾನವಿದೆಯೆಂದು ಸಬೂಬು ಹೇಳಿ ಅವನ ಗೋರಿ ಕಟ್ಟಲು ಹಲವರು ಮುಂದಾಗಿದ್ದಾರೆ. ಅದೆಷ್ಟೋ ಮುಗ್ಧ ಜೀವಗಳನ್ನು ಬಲಿತೆಗೆದ ಅವನನ್ನು ಇಸ್ಲಾಮಿನ ರಕ್ಷಕನೆಂದು ಕೊಂಡಾಡಿ, ಅದೇ ಪಾಕಿಸ್ತಾನದ  ಅಸ್ಸೆಂಬ್ಲಿನಲ್ಲಿ ಕೆಲವರು  ಶಾಂತಿಕೊರಿದ್ದೂ ಆಯಿತು. 

ಗಂಡ ಹೆಂಡತಿಯರ ಜಗಳ ಉಂಡು ಮಲಗುವ ತನಕವಂತೆ.ಅದೇ ಗಂಡನನ್ನು ಇಡೀ ದಿನ ಹಾಗೇ ಉಂಡು ಮಲಗಿದ ನಂತರವೂ ದೂಷಿಸಿದ ಹೆಂಡತಿ, ಆತ ಸತ್ತ ಬಳಿಕ ವಿಮೆಯ ಹಣ ಸಿಗುವಾಗ "ಹೇಗೆ ಇರಲಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದ. ಬಿಟ್ಟು ಹೋಗೆ ಬಿಟ್ಟನಲ್ಲ" ಎಂದು ಗಂಡನ ಫೋಟೋದ ಅದುರು ಊದಿನ ಕಡ್ಡಿಯನ್ನು ಹಚ್ಚಿ ಅಳುತಾಳಂತೆ..   

ಹೀಗೆ ಬದುಕಿರುವಾಗ ಹೇಗೆ ಇರಲಿ ಸತ್ತ ಮೇಲಂತೂ ಅತ್ಯುನ್ನತ ಸ್ಥಾನವನ್ನು ನೀಡುವುದು ನಮ್ಮ ವಾಡಿಕೆ.ಯಾವುದೇ ದೇಹದೊಂದಿಗಿದ್ದ  ಆತ್ಮದಿಂದ ನಮಗೆ ಉಪಕರವಾಗಿರಲಿ ಯಾ ಅತೀವ ತೊಂದರೆಯಾಗಿರಲಿ, ದೇಹ ತೊರೆದ ಕೂಡಲೇ  ಆ ಆತ್ಮಕ್ಕೆ ಪವಿತ್ರತೆ ಬಂದು ಬಿಡುತ್ತದೆ. ಈ ಚಿಂತನೆ ಭಾರತದಿಂದಲೇ ಆರಂಭಗೊಂಡಿರಬೇಕು. ನಮ್ಮಲ್ಲಿ ಉಗ್ರ ಖೈದಿಗೆ ಮರಣದಂಡನೆಯನ್ನು ನೀಡುವ ಸಮಯದಲ್ಲೂ ಸಹ ಪವಿತ್ರ ಸ್ನಾನವನ್ನು ಮಾಡಿಸಿ, ಪವಿತ್ರ ಗ್ರಂಥಗಳ ಪಟನವನ್ನು ಮಾಡಲಾಗುತ್ತದೆ.  ನಾವಿಂದು ಪೂಜಿಸುವ ಹಲವು ಸಾಧು ಸಂತರು, ದಾಸ ಶ್ರೇಷ್ಟರು ಬದುಕಿರುವಾಗ ನಮ್ಮಿಂದ ಧೂಷನೆಗೊಳಗಾದವರೇ. 

ಬದುಕಿದ್ದಾಗ ನಾವು ಒಬ್ಬರಿಗೂ ಸಹಾಯ ಮಾಡುವುದಿಲ್ಲ. ಅವರ ಉತ್ತಮ ಕೆಲಸಗಳನ್ನು ಹೊಗಳುವುದಿಲ್ಲ. ಅನೇಕರ ಸಾವಿಗೆ ಪ್ರತ್ಯಕ್ಷ ಯಾ ಪರೋಕ್ಷವಾಗಿ ನಾವೇ ಹೊಣೆಯಾಗುತ್ತೇವೆ. ಇದೆ ರೀತಿ ಕೆಟ್ಟವರನ್ನು ಒಳ್ಳೆಯವರನ್ನಾಗಿಸಲು ಪ್ರಯತ್ನಿಸುವುದಿಲ್ಲ. ಅವರಿಗೆ ಇನ್ನೂ ಪಬ್ಲಿಸಿಟಿ ಕೊಡಿಸಿ ಜನ ಇನ್ನೂ ಭಯಪಡುವಂತೆ ಮಾಡುತ್ತೇವೆ. ಕೆಟ್ಟವರಾದ  ಅಂಗುಲಿಮಾಲ, ಚಂಡ ಅಶೋಕರಂತವರೆ ಉತ್ತಮರಾದ ದೇಶ ನಮ್ಮದು.               

ಮರಣವೆಂಬ ನಿತ್ಯ ಸತ್ಯದ ಮೊದಲು ಮತ್ತು ಬಳಿಕದ ಜೀವನದ ಬಗ್ಗೆ ಬರೆಯಲು ಹೊರಟಿಲ್ಲ. ಆದರೂ 'ನಮ್ಮವರ' ಸ್ವಭಾವನ್ನು ನೋಡಿ ಹೇಳಬಯಸುವುದ್ದಿಷ್ಟೇ.. ಹೋದವರೇ ಒಳ್ಳೆಯವರು.. ನಾವೇ ಬರೀ ಕೆಟ್ಟವರು ...........

Thursday, 12 May 2011

ಕಲ್ಬುರ್ಗಿ ನಗರ ನಾನು ಕಂಡಂತೆ.......

ಎರಡೂವರೆ ವರ್ಷಗಳ ಹಿಂದೆ ಕಲ್ಬುರ್ಗಿ ( ಹಿಂದಿನ ಗುಲ್ಬರ್ಗ) ನಗರಕ್ಕೆ ಪೋಸ್ಟಿಂಗ್ ಅದಾಗ ಮನದಲ್ಲೇನೋ ಅಂಜಿಕೆ. ಸ್ವಂತ ಊರಾದ ಮಂಗಳೂರಿನಿಂದ ತುಂಬಾ ದೂರವಾಗುವ ವಿಚಾರವೊಂದಾದರೆ, ಇಡೀ ಉತ್ತರ ಕರ್ನಾಟಕದ ಬಗ್ಗೆ ಏನೋ ಒಂದು ಭಾವನೆ ಮನೆ ಮಾಡಿತ್ತು. ಯಾವುದೇ ಪ್ರದೇಶವಿರಲಿ ಯಾ ನಗರವಿರಲಿ, ಅದನ್ನು ಮಂಗಳೂರಿನೊಂದಿಗೆ ತಾಳೆ ಹಾಕಿ ನೋಡುವುದು ನನ್ನ ಸ್ವಭಾವ. ವಿಸ್ತೀರ್ಣಥೆಯನ್ನು ನೋಡಿದರೆ ನಗರ ಬಹಳವೇ ದೊಡ್ಡದು. ಈ ಭಾಗದ ಜನರೇ ಹೇಳುವಂತೆ ಇದು ಹಿಂದುಳಿದ ಪ್ರದೇಶ. ಇದಕ್ಕೆ ಇಲ್ಲಿಂದ ಗೆದ್ದು ಬಂದಂತಹ ರಾಜಕಾರಣಿಗಳ ಕೊಡುಗೆಯಂತು ಬಹಳವೇ. ಶಿಕ್ಷಣ ಮಟ್ಟ ತೀರ ಕಳಪೆ ಮಟ್ಟದಲ್ಲಿಲ್ಲದಿದ್ದರು ಅತ್ಯುತ್ತಮವೆಂದು ಹೇಳುವಂತಿಲ್ಲ. ಹಲವರು ಆಸ್ಪತ್ರೆಗಳಿದ್ದರೂ ಉನ್ನತ ಚಿಕಿಸ್ತೆಗಾಗಿ ರೋಗಿಗಳು ಹೈದ್ರಬಾದಿಗೋ ಇಲ್ಲ ಬೆಂಗಳೂರಿಗೋ ಹೋಗಲೇ ಬೇಕು.

ಕಲಬುರ್ಗಿಯ ಬಗ್ಗೆ ಏನೇ ಕಪೋಕಲ್ಪಿತವಿರಲಿ, ಕಳೆದ ಎರಡೂವರೆ ವರ್ಷಗಳಿಂದ ನಾನು ಗಮನಿಸಿದಂತೆ ನಗರವಂತೂ ಬೆಳೆಯುತ್ತಲಿದೆ. ರಾಜಕಾರಣಿಗಳೂ ಇತ್ತ ಕಡೆ ಮುಖ ಮಾಡಿದಂತಿದೆ. ರಸ್ತೆಗಳು ಅಗಲಗೊಳ್ಳುತಿದೆ, ಕಟ್ಟಡ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಅನೇಕ ಶಾಪಿಂಗ್ ಕಾಂಪ್ಲೆಕ್ಸುಗಳು ಈಗಾಗಲೇ ತಲೆ ಎತ್ತಿವೆ.ಯಾವುದೇ ಬ್ರಾಂಡೆಡ್ ಮಾಲುಗಳು ಈಗ ಇಲ್ಲಿ ಲಬ್ಯ. ಪ್ರಮುಖ ವಾಣಿಜ್ಯ ಬ್ಯಾಂಕುಗಳು ಇತ್ತ ಕಡೆ ಬರುತ್ತಿವೆ.ಕರ್ನಾಟಕದ ಹಲವಾರು ನಗರಗಳಲ್ಲೇ ಇಲ್ಲದ ಮಲ್ಟಿಪ್ಲೆಕ್ಸ್ ಗಳು ಇಲ್ಲಿವೆ.

 ಕಲ್ಬುರ್ಗಿ ನಗರವಂತೂ ಬಿಸಿಲಿನ ಬೇಗೆಗೆ ಪ್ರಸಿದ್ಧ. ಹೀಗಿದ್ದರೂ ನಗರವನ್ನು ತಂಪುಗೊಳಿಸಲು ಅನೇಕ ಉದ್ಯಾನವನಗಳು ಸೃಷ್ಟಿ ಆಗಿವೆ.ಕರ್ನಾಟಕ ಇತಿಹಾಸದ ಮುಖ್ಯ ಸ್ಥಳಗಳು ಇಲ್ಲಿರುವುದರಿಂದ ಪ್ರವಾಸಿಗಳಿಗೂ ಇದು  ಅತ್ಯುತ್ತಮ ಆಯ್ಕೆ.ಮೆಡಿಕಲ್, ಇಂಜಿನಿಯರ್ ಕಾಲೇಜುಗಳೂ ಆರಂಭಗೊಂಡಿರುವ ಕಾರಣ ಅಕ್ಕ ಪಕ್ಕದ ನಗರಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಈ ಸಲದ ಪಿ ಯು ಸಿ ಹಾಗು ಎಸ್ ಎಸ್ ಎಲ್ ಸಿ ಯಲ್ಲೂ ಅನೇಕರು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ನಗರವಂತೂ ದಿನೇ ದಿನೇ ಸುಂದರಗೊಳ್ಳುತಿದ್ದೆ. ಇದಕ್ಕೆ  ನಾನು ಬಂದ ಕಾರಣವೂ ಇರಬಹುದು.

ಏನೇ ಇರಲಿ, ಮಂಗಳೂರಿನವನಾದ ನಾನು ಹೇಳುವುದಿಷ್ಟೇ ........ ಅಲ್ಲಿದೆ ನನ್ನ ಮನೆ....ಇಲ್ಲಿ ಬಂದೆ ಸುಮ್ಮನೆ......