Wednesday, 5 October 2011

ಅನ್ಯಥಾ ಶರಣಂ ನಾಸ್ತಿ............................

ಪುರಾಣದಲ್ಲಿ ಗಜೇಂದ್ರ ಮೋಕ್ಷವೆಂಬ ಸನ್ನಿವೇಶ ಬರುತ್ತದೆ.ಪಾಪಾತ್ಮಗಳಿಗೆ ಮರಣದ ಬಳಿಕ ಭಗವಂತನು ಮೋಕ್ಷ ಕರುಣಿಸಿದ  ಅನೇಕ ಕಥೆಗಳನ್ನು ಕೇಳಿದ್ದುದ್ದರಿಂದ ಆ ಆನೆಗೂ ಇದೇ ರೀತಿ ಮೋಕ್ಷ ಸಿಕ್ಕಿರಬೇಕೆಂದು ಚಿಕ್ಕಂದಿನಲ್ಲಿ ತಿಳಿದುಕೊಂಡಿದ್ದೆ. ಆದರೆ ಈ ಘಟನೆಯಲ್ಲಿ ಮೋಕ್ಷದ ಅರ್ಥವೆಂದರೆ ಬದುಕಿರುವಾಗಲೇ ಬಂತಂತಹ ಕಷ್ಟದಿಂದ ಬಿಡುಗಡೆ.ಸ್ನಾನಕ್ಕಾಗಿ ಸರೋವರಕ್ಕೆ ತೆರಳಿದ ಗಜೇಂದ್ರನೆಂಬ ಆನೆಯ ಕಾಲನ್ನು ಮೊಸಳೆಯೊಂದು ಕಬಳಿಸಲು ಪ್ರಯತ್ನಿಸುತ್ತದೆ. ತಾನೇ ಬಲ ಶಾಲಿಯೆಂದು   ತಿಳಿದ ಆನೆಯು ಮೊಸಳೆಯಿಂದ ಬಿಡಿಸಿಕೊಳ್ಳಲು ಎಲ್ಲಾ ಕಸರತ್ತನ್ನು ಮಾಡುತ್ತದೆ. ಆದರೆ ನೀರಲ್ಲಿ ಮೊಸಳೆಯೆದುರು ಅದು ಸೋಲನ್ನನುಭವಿಸುತ್ತದೆ.ಇನ್ನೇನು ತನ್ನ ಪ್ರಾಣಪಕ್ಷಿ ಹಾರಿ ಹೋಗುತ್ತದೆ ಎಂದು ತಿಳಿದಾಗ ತನ್ನೆಲ್ಲ ಪ್ರಯತ್ನವನ್ನು ಬಿಟ್ಟು ಅದು ಭಗವಂತನಿಗೆ ಮೊರೆ ಹೋಗುತ್ತದೆ. ಗರುಡ ವಾಹನನಾದ ವಿಷ್ಣುವು ಕ್ಷಣಮಾತ್ರದಲ್ಲಿ ಅಲ್ಲಿ ಧಾವಿಸಿ ಮೊಸಳೆಯಿಂದ ಆನೆಯನ್ನು ಪಾರುಮಾಡುತ್ತಾನೆ. ಭಗವಂತನು ಬರುವುದೇನೋ ಬಂದು ಬಿಟ್ಟ, ಸ್ವಲ್ಪ ಬೇಗ ಬರಬಾರದಿತ್ತೆ? ಆನೆ ನೋವು ತಿನ್ನುವುದಾದರೂ ತಪ್ಪುತ್ತಿತ್ತು.ಆನೆಯೂ ಸಹ ಮೊದಲು ದೇವರ ಮೊರೆ ಹೋಗಲೇ ಇಲ್ಲ. ಎಂದು ಪರಮಾತ್ಮನೇ ಎಲ್ಲ ಎಂದು ಪ್ರಾರ್ಥಿಸಿತೋ ತಕ್ಷಣ ಅದು ಪರಿಹಾರವನ್ನು ಪಡೆಯಿತು.

ಮಹಾಭಾರತದಲ್ಲಿ ದ್ರೌಪತಿ ವಸ್ತ್ರಾಪಹರಣದ ಕೆಟ್ಟ ಗಳಿಗೆ. ಪತಿವರೈವರಿದ್ದರೇನು? ಸತಿಯನ್ನು ಕಾಪಾಡಲು ಯಾರಿಂದಲೂ ಸಾಧ್ಯವಾಗದೆ ಹೋಯಿತು.ದುಷ್ಟ ದುಶ್ಯಾಸನನು ಪಾಂಚಾಲಿಯ ಸೆರಗನ್ನು ಸೆಳೆಯುತ್ತಿರಬೇಕಾದರೆ ಧುರ್ಯೋದನನು ಅಟ್ಟಹಾಸಗೈಯುತಿದ್ದನು. ಕೌರವ ಸಹೋದರರಿಂದ ತನಗೆ ಬಿಡುಗಡೆಯಿಲ್ಲವೆಂದು ತಿಳಿದಿದ್ದರೂ ಅವಳು ಅವರಿಂದ ಬಿಡಿಸಿಕೊಳ್ಳುವ, ತನ್ನ ಶೀಲವನ್ನು ಉಳಿಸಿಕೊಳ್ಳುವ ವಿಫಲ ಯತ್ನವನ್ನು ಮಾಡುತಿದ್ದಳು.ಇನ್ನು ತನ್ನಿಂದ ಏನೂ ಸಾಧ್ಯವಿಲ್ಲವೆಂದಾಗ ಅಣ್ಣನಾದ ಕೃಷ್ಣನಿಗೆ ತುಂಬು ಹೃದಯದಿಂದ ಮೊರೆಹೊಗುತ್ತಾಳೆ. ವಾಸುದೇವನಂತೂ ತಾನು ಇದ್ದಲಿಂದಲೇ ಅನುಗ್ರಹಿಸಿ ಅಕ್ಷಯ ಅಮ್ಬರವನ್ನು ನೀಡುತ್ತಾನೆ.. ಆ ಅಕ್ಷಯಾಮ್ಬರವನ್ನು ಸೆಳೆಯಲು ವಿಫಲನಾದ ದುಶ್ಯಾಸನನು ತಾನೇ ಸುಸ್ತಾಗಿ ಹೋಗುತ್ತಾನೆ. ಪರ ಪುರುಷನಿಂದ ಸ್ಪರ್ಷಿಸಲ್ಪಟ್ಟ ಸಮಯದಲ್ಲೇ ಅಣ್ಣನೂ ಹಾಗೆಯೇ ಪರಮ ಚೇತನನೂ ಆದ ಶ್ರೀ ಕೃಷ್ಣನು  ದ್ರೌಪತಿಯ ಸಹಾಯಕ್ಕೆ ಬರಬಹುದಿತ್ತು. ಆದರೆ ಸ್ವಪ್ರಯತ್ನಕ್ಕೆ ಮೊರೆ ಹೋದ ದ್ರೌಪತಿಗೆ  ಆ ಅವಕಾಶವನ್ನು ನೀಡುವ ಸಲುವಾಗಿ ಅವನು ಬರಲೇ ಇಲ್ಲ. ಆದರೆ ಯಾವಾಗ ತುಂಬು ಮನಸ್ಸಿನಿಂದ 'ಅಣ್ಣಾ..' ಎಂದು ಕರೆದಳೋ ಅವನಿಗೆ ಅನುಗ್ರಹಿಸದೆ ಇರಲು ಸಾಧ್ಯವಾಗಲೇ ಇಲ್ಲ.

ಭಗವಂತನೆಂಬ ಶಕ್ತಿ ಹಾಗೇನೆ. ತನ್ನಿಂದ ಏನೂ ಇಲ್ಲ, ಎಲ್ಲಾ ನಿನ್ನಿಂದಲೇ ಎಂದು ಕರೆದಾಗ ಕ್ಷಣ ಮಾತ್ರದಲ್ಲಿ ನೆರವು ಸಿಗುತ್ತದೆ.ಇದು ಪರಮ ಶಕ್ತಿಯೆದುರು ನಾವು ಶೂನ್ಯವಾಗುವ ವಿಷಯವೂ ಹೌದು. ನಾವಂತೂ ಬರೀ ಅರಿಶಧ್ವರ್ಗಗಳಿಂದ   ಬಂಧಿಸಲ್ಪಟ್ಟು ಎಲ್ಲವನ್ನೂ ತುಚ್ಚವಾಗಿ ಕಂಡುಕೊಂಡು, ನಮ್ಮ ಮೇಲೇನೆ ಅತಿಯಾಗೆ ನಂಬಿಕೆ ಇಟ್ಟುಕೊಂಡು  ಅಹಂನಿಂದ ಬಾಳುತಿರುತ್ತೇವೆ. ಈ ಸ್ಥಿತಿಯಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಮಾಡಲು ಇಚ್ಚಿಸುವುದೂ ಇಲ್ಲ.ಕಷ್ಟವನ್ನು  ತಾನೇ ಪರಿಹರಿಸಲು ಸಾಧ್ಯ, ತನಗೆ ಬಂಧು-ಬಾಂಧವರಿದ್ದಾರೆ.ಅವರು ತನ್ನ ಕಷ್ಟಕ್ಕೆ ಬರುತ್ತಾರೆ ಎಂದು ತಿಳಿದು ನಾವು ದೇವರ ಮೊರೆ ಹೋಗದೆ ಇರಬಹುದು. ನಮ್ಮ ಶಕ್ತಿ ಸಾಮರ್ಥ್ಯ, ಬಂಧು-ಬಳಗದವರು ನಮಗೆ ಸಹಾಯ ಮಾಡಬಹುದು ಯಾ ಮಾಡದೆ ಇರಬಹುದು. ಆದರೆ ನಮ್ಮ ಈ ನಂಬಿಕೆಗೂ ಒಂದು ಅವಕಾಶ ಕೊಡುವ ಸಲುವಾಗಿ ಭಗವಂತನು ರಂಗ ಪ್ರವೇಶ ಮಾಡುವುದೇ ಇಲ್ಲ. ಆದರೆ 'ಶೂನ್ಯ' ಸ್ಥಿತಿಗೆ ತಲುಪಿದ ನಮ್ಮ ಪ್ರಾರ್ಥನೆಯಿಂದ ನಮ್ಮ ಇಚ್ಛೆ ನೆರವೆರುವುದರಲ್ಲಿ ಸಂಶಯವೇ ಇಲ್ಲ. ಒಂದು ಶ್ಲೋಕ ಹೀಗಿದೆ, ಅನ್ಯಥಾ ಶರಣಂ ನಾಸ್ತಿ...ತ್ವಮೇವ ಶರಣಂ ಮಾಮ..ತಸ್ಮಾದ್ ಕಾರುಣ್ಯ ಭಾವೇನೆ ರಕ್ಷ ರಕ್ಷ ಸುರೇಶ್ವರ...( ಭಗವಂತಾ, ನನಗೆ ನಿನ್ನ ಹೊರತು ಬೇರೆ ಯಾರೂ ಗತಿಯಿಲ್ಲ. ಆದುದರಿಂದ ನೀನೆ ನನ್ನನ್ನು ರಕ್ಷಿಸ ಬೇಕು). ಈ ರೀತಿಯ ಆಳವಾದ ಕರೆಯಿಂದ ಕಲಿಯುಗದಲ್ಲೂ ಹಲವಾರು ವಿಚಿತ್ರತೆಗಳು ನಡೆದಿವೆ.ಇಹಲೋಕ ತ್ಯಜಿಸಿದ ಎಂದು ವೈದ್ಯರಿಂದ ಖಚಿತ ಗೊಂಡ ವ್ಯಕ್ತಿಯು ಬದುಕಿದ್ದಾನೆ. ಬೀದಿ ಪಾಲಾದ ವ್ಯಕ್ತಿಯು ದೇವರ ಅನುಗ್ರಹದಿಂದ ಮತ್ತೆ ಉನ್ನತ ಸ್ಥಾನಕ್ಕೆರಿದ್ದಾನೆ.  

ಭಗವಂತನೆಂಬ ಶಕ್ತಿಯನ್ನು ಬಿಟ್ಟು ಕೂಡ ಮೇಲೆ ಹೇಳಿದ ತತ್ವವನ್ನು ವಿವರಿಸಬಹುದು. 'ನೀನೆ ಎಲ್ಲಾ.. ನಿನದೆ ಎಲ್ಲಾ..'ಎನ್ನುವುದು ಇಹಲೋಕದ ಸುಖ-ಸಂತೋಷಕ್ಕೂ ಕೊಂಡಿಯಾಗಿದೆ.ಸ್ವಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳುವ ವ್ಯಕ್ತಿಗೆ ಉತ್ತಮ ಗೆಳೆಯರು ಸಿಗುವುದು ಕಷ್ಟ. ತೌರನ್ನು ಬಿಟ್ಟು ಬಂದಂತಹ ಹೆಣ್ಣೊಬ್ಬಳು ಗಂಡನ ಮನೆಯಲ್ಲಿ ತನ್ನ ಅಣ್ಣಂದಿರ ಶ್ರೀಮಂತಿಕೆ, ಅತ್ತಿಗೆಯಂದಿರ ಆಡಂಬರದ ಬಗ್ಗೆನೇ ಮಾತನ್ನು ಆಡುತ್ತಾ  ತನ್ನ ಮನೆಯವರನ್ನು ಹೊಗಳುತ್ತಿದ್ದರೆ ಗಂಡ ಹೆಂಡಿರ ಸಂಬಂಧ ಕೆಡಲು ಹೆಚ್ಚು ದಿನ ಬೇಕಾಗಿಲ್ಲ.ಇದನ್ನು ಬಿಟ್ಟು ಪತಿಯೇ ಎಲ್ಲ ಎಂದು ಅವನ ಸೇವೆ ಮಾಡುತ್ತಾ ಅವನ ಕಷ್ಟ ಸುಖಗಳಲ್ಲಿ ಭಾಗಿಯಾದರೆ, ಗಂಡನ ಮನೆಯಲ್ಲಿ ಅವಳು ಉತ್ತಮ ಸ್ಥಾನ ಗಿತ್ತಿಸಿಕೊಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಪತಿರಾಯನಿಗೂ ಅನ್ವಯವಾಗುತ್ತದೆ.  ಇನ್ನು ಇದರಲ್ಲಿ ಭಗವಂತನನ್ನು ಸೇರಿಸಿಕೊಂಡು ವಿವರಣೆಯನ್ನು ನೀಡಿದರೂ, ಆ ಪರಮ ಶಕ್ತನಾದ ಪರಮಾತ್ಮನ ಮುಂದೆ ಕುಬ್ಜವಾಗುವುದು ಅವರ್ಣನೀಯ ಅನುಭವ. ಅದೂದರಿಂದಲೇ ಅನೇಕಾನೇಕ ದಾಸ ಶ್ರೇಷ್ಟರು, ಸಾಧು-ಸಂತರು ಭಗವಂತನೇ ಸರ್ವಶ್ರೇಷ್ಠ ಎಂದು ಗುಣ ಗಾನ ಮಾಡಿ ಆನಂದವನ್ನು ಹೊಂದಿದ್ದಾರೆ.

ಕೆಲವರು ಸ್ವಸಾಮರ್ಥ್ಯದಿದಲೇ ಯಶಸ್ಸನ್ನು ಗಳಿಸುತ್ತಿದ್ದಾರೆ. ಅವರೆಂದೂ ಭಗವಂತನ ಮೊರೆ ಹೋಗುವುದೇ ಇಲ್ಲ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ ದೇವರೇ ಇಲ್ಲವೆನ್ದಿದ್ದಾರೆ. ಆತ್ಮ ಮತ್ತು ಪರಮಾತ್ಮರ ಮಧ್ಯೆ ಕಲಹ ಯಾವತ್ತಿಂದಲೋ ನಡೆದುಕೊಂಡು ಬಂದಿದೆ. ಇದಕಂತು ಸ್ಪಷ್ಟ ವಿವರಣೆ, ಅಂತ್ಯ ನೀಡಲೂ ಸಾಧ್ಯವಿಲ್ಲ. ಇನ್ನೇನು ಸಂಶಯ ನಿವಾರಣೆ ಯಾಯಿತು ಎನುವಾಗ ನಾವಿನ್ನೂ ಆರಂಭದಲ್ಲೇ ಇದ್ದೇವೆ ಅಥವಾ ಪ್ರಶ್ನೆಯ ಇನ್ನೊಂದು ಸುಳಿಯಲ್ಲಿ ಸಿಳುಕ್ಕಿದ್ದೇವೆ ಎಂದು ಭಾಸವಾಗದೆ ಇರಲಾರದು. ಸ್ವಸಾಮರ್ಥ್ಯದಿಂದಲೇ ಇರಲಿ ಅಥವಾ ಭಗವಂತನ ಕೃಪೆಯಿಂದಲೇ ಇರಲಿ ಆತ್ಮ ಶುದ್ಧಿಯಿಲ್ಲದವನೆಂದೂ ಗೆಲುವನ್ನುಪಡೆಯಲಾರ. ಪಡೆದರೂ ಸಹ ಅದು ಕ್ಷಣಿಕವಷ್ಟೇ. ದೇವರು  ಇಲ್ಲವೆನ್ನುವನಾಗಿರಲಿ  ಯಾ ದೇವರೇ ಎಲ್ಲ ಎನ್ನುವನೆ ಆಗಿರಲಿ ಜಯ ಪಡೆಯಬೇಕೆಂದರೆ ಅರಿಶದ್ವರ್ಗಗಳಿಂದ ಸ್ವಲ್ಪವಾದರೂ ಬಿಡುಗಡೆ ಪಡೆದವನಾಗಿರಲೇ ಬೇಕು.

ಇಷ್ಟೆಲ್ಲಾ ಅಂದ ಮೇಲೆ ಇನ್ನೊಂದು ವಿಚಾರವನ್ನು ಹೇಳಲೇ ಬೇಕು.ಕಾಯುವ ದೇವರೇ ನಮನ್ನು ಕೊಂಡರೆ? ರಾಮಾಯಣದ ಒಂದು ಚಿಕ್ಕ ತುಣುಕು.ತಿಳಿಯದೆ ಯಾವುದೊ ಕಾರಣದಿಂದಾಗಿ ಕಪ್ಪೆಯೊಂದಕ್ಕೆ ಶ್ರೀ ರಾಮನಿಂದ ತೊಂದರೆಯಾಗುತ್ತದೆ. ಬಳಿಕ ಈ ಘಟನೆಯಿಂದ ಮುಜುಗರಕ್ಕೆ ಒಳಗಾದ ರಾಮನು ಇದರ ಬಗ್ಗೆ ತನಗೆ ಯಾಕೆ ತಿಳಿಸಲಿಲ್ಲ ವೆಂದು ಕೇಳುತ್ತಾನೆ.ಅದಕ್ಕೆ ಆ ಕಪ್ಪೆಯು, 'ಶ್ರೀ ರಾಮ, ನೀನೆ ನಮ್ಮನ್ನು ರಕ್ಷಿಸಬೇಕಾದವನು. ನಿನ್ನಿಂದಲೇ ನಾವು ತೊಂದರೆಗೊಳಗಾದರೆ ನಮ್ಮನ್ನು ರಕ್ಷಿಸುವವನಾರು?' ಈ ಮಾತನ್ನು ಕೇಳಿದಂತಹ ರಾಮನು ತನ್ನಿಂದಾದ ತಪ್ಪಿಗಾಗಿ ಅತೀವ ವೆದನೆಗೊಳಗಾಗುತ್ತಾನೆ . ಮಾನವ ಜನ್ಮದಲ್ಲಿ ಹುಟ್ಟಿದ ರಾಮನು ಅಯೋಧ್ಯೆಯ ರಾಜನಗಿದ್ದುದರಿಂದ ಅವನು ಪ್ರಜೆಗಳಿಗೆ ಪ್ರತ್ಯಕ್ಷ ದೇವನಾಗಿದ್ದ. ಮುಂದೆ ಎಂದೂ ತನ್ನ ಆಡಳಿತದಲ್ಲಿ ಯಾರಿಗೂ ತೊಂದರೆ ಯಾಗದಂತೆ ನೋಡಿಕೊಳ್ಳುತ್ತಾನೆ. ಅವನ ಆಡಳಿತದಲ್ಲಿ ಪ್ರಜೆಗಳೆಲ್ಲರೂ ಅತ್ಯಂತ ಸುಖಿಗಳಾಗಿರುತ್ತಾರೆ. ಆದರೆ ಇಂದು ಆಗುತ್ತಿರುವುದೇನು? ರಕ್ಷಕರೇ ನಮ್ಮ ಭಕ್ಷ್ಕರಾಗಿದ್ದಾರೆ.ಪ್ರಜೆಗಳ ಏಳಿಗೆಗೆ ಮೀಸಲಿರಿಸಬೇಕಾಗಿದ್ದ  ರಾಷ್ಟ್ರದ ಸಂಪತ್ತುಗಳು ರಾಜಕಾರಣಿಗಳಿಂದ ಲೂಟಿಯಾಗುತ್ತಿದೆ.ಹತ್ತು ಹಲವಾರು ತಲೆಮಾರುಗಳು ಕೂತು ಉಂಡರೂ ಸಹ ಖಾಲಿಯಾಗದಿರುವಂತಹ ಆಸ್ತಿಯನ್ನು ಹೊಂದಿಸಿಕೊಳುತಿದ್ದಾರೆ. ಅತ್ಯಾಚಾರ ಅನಾಚಾರ ಎಲ್ಲೇ ಮೀರುತ್ತಿದೆ.ಇಂತಹ ಸಂದರ್ಭದಲ್ಲಿ ನಾವು ಪ್ರಾರ್ಥನೆಯನ್ನು ಮಾಡೋಣ......ಅನ್ಯಥಾ ಶರಣಂ ನಾಸ್ತಿ ............ಈ ಪ್ರಾರ್ಥನೆ ನಮ್ಮ ಲೋಕಾಯುಕ್ತರ ಪರವಾಗಿಯೇ ಇರಬಹುದು ಇಲ್ಲ ನೇರವಾಗಿ ಅ ಭಗವಂತನ ಸಲುವಾಗಿಯೇ ಇರಬಹುದು....ಯಾರಾದರೂ  ರಕ್ಷ.....ರಕ್ಷ.......... 

Saturday, 13 August 2011

ನಾವೂ............. ನಮ್ಮೊಳಗಿರುವ ದೇಶದ್ರೋಹಿಗಳೂ..........

ಇಡೀ ದೇಶವೇ ಸ್ವಾತಂತ್ರ್ಯೋತ್ಸವದ  ಸಂಭ್ರಮದಲ್ಲಿದೆ. ಕೆಲವರಲ್ಲಂತೂ ದೇಶ ಪ್ರೇಮ ಉಕ್ಕಿ ಹರಿಯುತ್ತಿದೆ.ನಾಡನ್ನೆ ಲೂಟಿ ಹೊಡೆದ ನಾಯಕರುಗಳ ಕೈಯಲ್ಲಿ ಧ್ವಜಾರೋಹಣ ನಡೆಸಲ್ಪಡುತ್ತದೆ. ಕೆಲವರಿಗಂತೂ ಉಳಿದ ರಜೆಗಳಂತೆ ಇದೂ ಕೂಡಾ ಒಂದು. ಬ್ರಿಟಿಷರ ಆಡಳಿತದಲ್ಲಿ ಬಳಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪೀಳಿಗೆಯವರಲ್ಲಿ ಕೆಲವರೇ ಇಂದು ಬದುಕಿ ಉಳಿದಿದ್ದಾರೆ. ಭಾರತ ದೇಶವು ಬ್ರಿಟೀಷರ ಆಡಳಿತದಲ್ಲಿದ್ದಾಗ ಪಟ್ಟಂತಹ ಪಾಡೇನು ಎಂಬುದರ ಬಗ್ಗೆ ಕಲ್ಪನೆಯನ್ನೂ ಮಾಡಲು ನಾವು ಸಿದ್ಧರಿಲ್ಲ. ಇದರಿಂದಾಗಿ ದಿನೇ ದಿನೇ ಸ್ವಾತಂತ್ರ್ಯದ ಮಹತ್ವವೂ ಕಡಿಮೆಯಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯ ಸ್ವಲ್ಪ ಹೆಚ್ಚೇ ಆಗಿ ಅದು ಸ್ವೇಚ್ಚಾಚಾರವಾಗಿ ಪರಿವರ್ತನೆಯಾಗಿದೆ.

ಹಲವಾರು ಹೋರಾಟಗಳ ಪರಿಣಾಮವಾಗಿಯೇ ಭಾರತವು ಸ್ವತಂತ್ರವಾಯಿತು. ನಾವು ಹೊರಗಿನವರಾದ ಆಂಗ್ಲರಿಂದ ಸ್ವಾತಂತ್ರಗೊಂಡಿರಬಹುದು. ಆದರೆ ನಮ್ಮೊಳಗಿನ ಶತ್ರುಗಳಾದ ಅರಿಷಡ್ವರ್ಗಗಳಿಂದ ಸ್ವತಂತ್ರಪಡೆಯಲು ಸಾಧ್ಯವಾಗಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ದುಷ್ಟ ಶಕ್ತಿಗಳು ನಮ್ಮನ್ನು ಆಳುತ್ತಿವೆ. ಅಂದು ನಾವು ಇದೆ ಶಕ್ತಿಗಳಿಂದ ಬಂಧಿತರಾಗಿದ್ದುದರಿಂದಲೇ ಬ್ರಿಟೀಷರು ಭಾರತಕ್ಕೆ ಬರಲು ಸಾಧ್ಯವಾಯಿತು. ಇದೆ ಚಾಳಿಯನ್ನು ಮುಂದುವರಿಸಿದರೆ ಇನ್ನೊಂದು ದೇಶವೂ ನಮ್ಮನ್ನು ಆಳಲು ಇಚ್ಚಿಸಬಹುದು.

'ಕಾಮಾತುರಾಣಾಂ ನ ಭಯ ನ ಲಜ್ಜಾ' ಎಂದು ನಮ್ಮ ಪೂರ್ವಿಕರೇ ಹೇಳಿ ಬಿಟ್ಟಿದ್ದಾರೆ. ಇಂದು ನಮಗೆ ಆಸೆ ಹೆಚ್ಚಾಗುತ್ತಿದೆ. ಕಂಡದ್ದೆಲ್ಲಾ ಪಡೆಯುವ ಇಚ್ಛೆ ಅಧಿಕವಾಗುತ್ತಿದೆ. ನಮ್ಮ ಆಕಾಂಕ್ಷೆಯನ್ನು  ಹತ್ತಿಕ್ಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಭೋಗ ಭಾಗ್ಯಗಳ ಅಭಿಲಾಷೆಯಲ್ಲಿ ಅಡ್ಡ ದಾರಿ ಹಿಡಿಯುತ್ತಿದ್ದೇವೆ. ಅತ್ಯಾಚಾರ, ಅನಾಚಾರ ಮೇರೆ ಮೀರುತ್ತಿದೆ. ಕಲಿಯುಗದಲ್ಲಿ ಕಾಮಿನಿ-ಕಾಂಚನಗಳ ಹಿಂದೆ ಹೋಗುವವರು ಅಧಿಕವಾದ ಹಾಗೆ ಮಾಡಿದ ಪಾಪಕ್ಕೂ ಇದೇ ಜನ್ಮದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಗರಣಗಳಲ್ಲಿ ಪಾಲುದಾರರಾದ ಘಟಾನುಘಟಿಗಳೆಲ್ಲ ಒಬ್ಬೊಬ್ಬರಾಗಿ ಜೈಲು ಪಾಲಾಗುತಿದ್ದಾರೆ.

 ಇಂದು ನಾವು ಕೋಪವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲವೆನ್ನುವಂತೆ ನಡೆದುಕೊಳ್ಳುತಿದ್ದೇವೆ. ಕ್ಷಣ-ಕ್ಷಣಕ್ಕೂ ಸಿಟ್ಟುಗೊಳ್ಳುತಿದ್ದೇವೆ. ಇದೇ ಕೋಪ ವಿಪರೀತವಾಗಿ ತಂದೆ ಮಗನನ್ನೂ, ಮಗ ತಾಯಿಯನ್ನೂ ಕೊಂದಂತಹ ಘಟನೆಗಳೂ ಬಹಳಷ್ಟಿವೆ. ಇದೇ ಕ್ರೋಧದಿಂದಾಗಿ ಸ್ನೇಹಿತರು, ಬಂಧುಗಳು ದೂರವಾಗುತ್ತಿದ್ದಾರೆ. ನಾವು ಎಷ್ಟು ಉತ್ತಮರಾಗಿದ್ದರೂ ಸಹ ಕೆಲವೊಮ್ಮೆ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಏನೇನೋ ಮಾಡುತಿದ್ದೇವೆ. ಕೋಪ ನಮ್ಮ ವೈರಿಯಾದರೂ, ಹಲವಾರು ಸಂಧರ್ಭಗಳಲ್ಲಿ ಅದನ್ನು ನಮ್ಮ ಸ್ನೇಹಿತನಾಗಿ ಪರಿವರ್ತಿಸಿಕೊಳ್ಳಬಹುದು. ಎಲ್ಲಿ ಕೋಪವನ್ನು ಪ್ರದರ್ಶಿಸಬೇಕೋ ಅಲ್ಲಿ ನಾವು ಪ್ರದರ್ಶಿಸುವುದಿಲ್ಲ. ಆಗ ನಾವು ಶಿಖ0ಡಿಗಳಂತೆ ವರ್ತಿಸುತ್ತೇವೆ. ಜಗತ್ತು ನಡೆಯುವುದೇ ಹೀಗೆ ಎಂದು ಶಾಂತ ಮೂರ್ತಿಗಳಾಗಿ ಬಿಡುತ್ತೇವೆ.

 'ದೇಶ ತನಗೇನು ಕೊಟ್ಟಿತು ಎಂಬುವುದು ಮುಖ್ಯವಲ್ಲ. ನಾನು ದೇಶಕ್ಕೆ ಏನು ಕೊಟ್ಟೆ ಅದು ಮುಖ್ಯ' ಹೀಗೆ ಎಲ್ಲೋ ಓದಿದ ನೆನಪು. ಆದರೆ ನಾವಿಂದು ಇತರರಿಂದಲೇ ಏನನ್ನಾದರೂ ಬಯಸುತ್ತೆವೆಯೇ ಹೊರತು ನಾವು ಏನನ್ನೂ ಕೊಡಲು ಸಿದ್ಧರಿಲ್ಲ. ಬರೀ ನಾವೇ ಶ್ರೀಮಂತರಾಗುತಿದ್ದೆವೆಯೇ ಹೊರತು ಹೃದಯ ಶ್ರೀಮಂತಿಕೆ ಬೆಳೆಸುತ್ತಿಲ್ಲ. ತೆರಿಗೆಯನ್ನು ನೀಡದೆ ಸರಕಾರಕ್ಕೆ ಮೋಸಮಾಡುತಿದ್ದೇವೆ. ಸಿಕ್ಕ ತೆರಿಗೆಯಲ್ಲಿ ಜನಸೇವೆ ಮಾಡುತಿದ್ದೇವೆ ಎಂದು ಸಾರಿ  ಅರ್ಧದಷ್ಟು ಹಣ ಗುಳುಂ ಮಾಡುವ ರಾಜಕಾರಣಿಗಳು ಜನತೆಗೆ ಮೋಸ ಮಾಡುತಿದ್ದಾರೆ. ಪರಮ ಲೋಭಿಗಳಾದ ಪುರಂದರರೆ, ದಾಸ ಶ್ರೆಷ್ಟರಾದ ನಾಡಿದು. ಆದರೆ ನಮ್ಮ ಲೋಭತನವನ್ನು ಹೋಗಲಾಡಿಸಲು ಆ ಪರಮಾತ್ಮನೇ ಇಳಿದು ಬರಬೇಕೋ ಗೊತ್ತಾಗುತ್ತಿಲ್ಲ.

ಹೇಗೆ ನಾವು ಲೋಭಿಗಳಾಗಿ ಲಾಭದ ಬಗ್ಗೆ ಚಿಂತಿತರಾಗಿದ್ದೆವೆಯೋ ಹಾಗೇನೆ ಮೋಹ ಪಾಶಕ್ಕೊಳಗಾಗಿ ಬಂಧಿತರಾಗಿದ್ದೇವೆ. ಕೆಲವರು ತಮ್ಮನ್ನು ತಾವೇ ಅತಿಯಾಗಿ ಪ್ರೀತಿಸಿದರೆ, ಇನ್ನು ಅನೇಕರು ತಮ್ಮ ಕುಟುಂಬದ ಸದಸ್ಯರನ್ನೂ ಅಥವಾ ಗೆಳೆಯರನ್ನೂ ಅತಿಯಾಗಿ ಮೊಹಿಸುವವರಾಗಿರುತ್ತಾರೆ.ಅವರ ಬಗ್ಗೆ ಇವರಿಗೆ ಎಷ್ಟು ಮೋಹವಿರುತ್ತದೆಯೆಂದರೆ, ಅವರಿಗಾಗಿ ಏನೂ ಮಾಡಲು ತಯಾರಿರುತ್ತಾರೆ. ಇದು ಹಾಳಲ್ಲವೆ೦ದು ಮೇಲ್ನೋಟಕ್ಕೆ ಕಂಡು ಬಂದರೂ ಇದರಿಂದ ಇತರರು ತೊಂದರೆಗೊಳಗಾಗುತ್ತಾರೆ. ಗಂಡು ಮಕ್ಕಳು ಮೋಹಿಸಲ್ಪಟ್ಟು ಹೆಣ್ಣು ಮಕ್ಕಳು ಮೂದಲಿಕೆಗೆ ಒಳಗಾಗುತಿದ್ದಾರೆ.ದೊಡ್ದವನನ್ನು ತಾಯಿ ಹೆಚ್ಚಾಗಿ ಪ್ರೀತಿಸಿದರೆ, ಚಿಕ್ಕವನನ್ನು ತಂದೆಯು ಅತಿಯಾಗಿ ಹಚ್ಚಿಕೊಳ್ಳುತ್ತಾನೆ. ಇದು ಕೆಲವೊಮ್ಮೆ ಸಂಸಾರ ಕಲಹಕ್ಕೂ ಕಾರಣವಾಗುತ್ತದೆ. ಒಬ್ಬ ಅಥವಾ ಕೆಲವೇ ಶಿಷ್ಯಂದಿರಿಗೆ ಪ್ರಾಮುಖ್ಯತೆಯನ್ನು ಕೊಟ್ಟು ಗುರುಗಳು ಇತರರನ್ನು ಕಡೆಗಣಿಸುತ್ತಿದ್ದಾರೆ. ಅನ್ಯಾಯದಲ್ಲಿ  ಪಾಲುಗಾರನಾಗಿದ್ದಾನೆ ಎಂದು ತಿಳಿದಿದ್ದರೂ ತನ್ನ ಪಕ್ಷಕ್ಕೆ ಸೇರಿದವನೆನ್ನುವ ಕಾರಣದಿಂದ ಆರೋಪಿಯನ್ನು ಶಿಕ್ಷಿಸಲು ರಾಜಕಾರಣಿಗಳು ತಯಾರಿಲ್ಲ. ನಾವು ವ್ಯಕ್ತಿ-ವ್ಯಕ್ತಿಯನ್ನು ಮೋಹಿಸುತ್ತೇವೆಯೇ ಹೊರತು ದೇಶವನ್ನೇ ಪ್ರೀತಿಸಲು ಮನ ಮಾಡುತ್ತಿಲ್ಲ.

ಮದಗೊಳಗಾದ ಆನೆಯ ಹಿ೦ಡು ನಾಡಿಗಾದರೂ ಪ್ರವೇಶಿಸಲಿ ಅಥವಾ ಇನ್ನೊಂದು ಕಾಡಿಗಾದರೂ ಹೋಗಲಿ ಆ ಪ್ರದೇಶವು ಇನ್ನಿಲ್ಲದಂತೆ ನಿರ್ನಾಮವಾಗಿ ಬಿಡುತ್ತದೆ. ಅಂತಹ ಆನೆಗಳಿಗೂ ನಮಗೂ ಇಂದು ಯಾವುದೇ  ವ್ಯತ್ಯಾಸ ತಿಳಿಯುತಿಲ್ಲ. ಇನ್ನು ಕೆಲವರಿಗೆ ಹಣಬಲ, ಜನಬಲದ ಮದ ಹತ್ತಿ ಬಿಟ್ಟಿದೆ.ನಮ್ಮ ಅಧಿಕಾರ, ಬೆಳವಣಿಗೆ ಬಗ್ಗೆ ಹೆಮ್ಮೆ ಪಡುವುದು ತಪ್ಪಲ್ಲ, ಆದರೆ ಇದೇ ಹೆಮ್ಮೆ ಮದದ ರೂಪ ಪಡಕೊ೦ಡಾಗ ಆಗುವ ಅನಾಹುತಗಳಿಗೆ ಎಣೆಯಿಲ್ಲ. ಆಗ ನಾವು ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳುತ್ತೇವೆ. ಆದರೆ ಆ ದಾರಿಯಲ್ಲಿ ಖೆಡ್ಡಾಗಳಿವೆ, ಕಂದಕಗಳಿವೆ ಎಂದು ನಮಗೆ ತಿಳಿದು ಬರುವುದೇ ಇಲ್ಲ.ಹಣಬಲ, ಜನಬಲವಿದೆಯೆಂದು ಮದದಿಂದ ಚುನಾವಣೆಗೆ ನಿಂತಂತಹ ಅನೇಕ ಪುಂಡರು ಟೇವಣಿಯನ್ನೂ ಸಹ ಕಳಕೊಂಡಿದ್ದಾರೆ.ತಾವೇ ಶಕ್ತಿವ೦ತರೆಂದು ತಿಳಿದುಕೊಂಡ ಗಲ್ಲಿ ಗಲ್ಲಿ ರೌಡಿಗಳೆಲ್ಲಾ ಘೋರ ಮರಣವನ್ನು ಕಂಡಿದ್ದಾರೆ.

ನಮ್ಮ ಇನ್ನೊಬ್ಬ ಮುಖ್ಯ ವೈರಿಯೆ೦ದರೆ ಅದು ಮತ್ಸರ. ರಾಮ-ರಾವಣರ ಯುದ್ದದ ಮುನ್ನ ಪೂಜಾ ಸ೦ದರ್ಭದಲ್ಲಿ ಯಾವಾಗ ರಾಮನಿಗೆ ಬ್ರಾಹ್ಮಣನೊಬ್ಬನು ಸಿಗುವುದಿಲ್ಲವೋ ಆಗ ಅವನು ತನ್ನ ವೈರಿಯಾದ ರಾವಣನನ್ನೇ ಪೂಜಾ ಕಾರ್ಯ ನೆರವೆರಿಸಿಕೊಳ್ಳಲು ಭಿನ್ನವಿಸಿಕೊಳ್ಳುತ್ತಾನೆ. ವಿಪ್ರೋತ್ತಮನಾದ ರಾವಣನು ಯಾವುದೇ ಮತ್ಸರಕೊಳಗಾಗದೆ ಪೂಜೆ ನೆರವೇರಿಸಿ, ರಾಮನನ್ನು ತುಂಬು ಮನಸ್ಸಿನಿಂದ ಹರಸುತ್ತಾನೆ. ಬದ್ಧ ವೈರಿಯಾದರೂ ಸಹ ಬೇಡಿದಲ್ಲಿ ತುಂಬು ಹೃದಯದಿಂದ ಆಶೀರ್ವದಿಸಬೇಕೆಂದು ವೇದೋಕ್ತಿಗಳು ಹೇಳುತ್ತವೆ. ಆದರೆ ಇತರರು ನಮ್ಮ ಬಂಧು ಮಿತ್ರರೇ ಆಗಿರಲಿ, ಆದರೆ ರೂಪ-ಗುಣ-ಐಶ್ವರ್ಯ-ಅಂತಸ್ತುವಿನಲ್ಲಿ ನಮಗಿಂತ ಉತ್ತಮರಾಗಿದ್ದರೆ, ನಾವು ಹೊಟ್ಟೆ ಕಿಚ್ಚು ಪಟ್ಟೇ ಪಡುತ್ತೇವೆ. ಬರಿ ಅಷ್ಟಕ್ಕೇ ಸೀಮಿತವಾಗದೆ ಎಲ್ಲಾ ರೀತಿಯಲ್ಲೂ ಅವರ ಕಾಲೆಳೆಯುವ ಪ್ರಯತ್ನ ಮಾಡುತ್ತೇವೆ.

ಅರಿಷಡ್ವರ್ಗಗಳ ಪರಿಕಲ್ಪನೆ ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆ. ನಮ್ಮ ಪುರಾಣ, ವೇದ, ಉಪನಿಷತ್ತು, ಮೀಮಾಂಸೆ ಇವುಗಳೆಲ್ಲಾ ಇದರ ಸುತ್ತೆ ತಿರುಗಾಡುತ್ತವೆ. ನಿಮಗೆ ಇವು ಯಾವುದರ ಬಗ್ಗೆಯೂ ನಂಬಿಕೆ ಇಲ್ಲವೆಂದಾದರೆ ಇವುಗಳನೆಲ್ಲಾ ಬದಿಗಿರಿಸೋಣ. ಸ್ವಲ್ಪ ಮುಂದುವರಿದು ದೇಶವೆಂಬ ಕಲ್ಪನೆಯನ್ನೂ ಮರೆತು ವೈಜ್ಞಾನಿಕ ದ್ರಿಷ್ಟಿಯಿಂದ ನೋಡಿದಾಗಲೂ ಅರಿಷಡ್ವರ್ಗಗಳು ವ್ಯಕ್ತಿಗೆ ಮಾರಕವಾಗಿವೆ. ನಾವು ದಿನ ನಿತ್ಯ ಕೇಳುವಂತಹ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಹಲವಾರು ಸಂಧರ್ಭಗಳಲ್ಲಿ ನಮ್ಮೊಳಗೇ ಇರುವ ಆರು ವೈರಿಗಳಿಂದ ಬಂದದ್ದಾಗಿದೆ. ಇಂದು ಪ್ರತಿಯೋರ್ವರೂ ಹೆಚ್ಚು-ಕಡಿಮೆ ಅರಿಷಡ್ವರ್ಗಗಳಿಂದ ಕಟ್ಟಲ್ಪಟ್ಟವರೆ.ಆದರೂ ಅದಕ್ಕೆ ಮಿತಿ, ಗಡಿಗಳು ಎನ್ನುವುದಿರುತ್ತದೆ. ಅದು ದಾಟಲ್ಪಟ್ಟರೆ ಮಾನಸಿಕ ಖಾಯಿಲೆಯಾಗಿ ನಮಗೆ 'ಹುಚ್ಚು' ಎಂಬ ಪಟ್ಟ ಸಿಕ್ಕರೂ ಸಿಗಬಹುದು.

 ನಮ್ಮ ಮನಸ್ಸಿನೊಳಗೆ ಆಂತರಿಕ ಕಲಹಗಳಿದ್ದರೂ, ನಮ್ಮ ದೇಶವು ಜಗತ್ತಿನ ಸುಭದ್ರ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣವಿಲ್ಲವೆಂದಲ್ಲ. ನಮ್ಮಲ್ಲಿ ಕೀಚಕರೊಂದಿಗೆ ಕೃಷ್ಣರೂ ಇದ್ದಾರೆ. 'ಸಮತ್ವ'ವನ್ನು ಪಡೆದ ಯೋಗಿಗಳಿದ್ದಾರೆ.ದೇಶಸೇವೆಗೆಂದು ತಮ್ಮ ಜೀವನವನ್ನೇ ಒತ್ತೆ ಇಟ್ಟಿರುವ ಹಲವಾರು ರಾಜಕಾರಣಿಗಳಿದ್ದಾರೆ. ಹಗಲು ರಾತ್ರಿಯೆನ್ನದೆ ದೇಶವನ್ನು ಕಾಯುತ್ತಿರುವ ಯೋಧರಿದ್ದಾರೆ. ದೇಶದಲ್ಲಿರುವ ಕೆಲವೇ ಕೆಲವು ಜನರುಗಳಿಂದ ಇಷ್ಟು  ಸಾಧ್ಯವಾಗಿರುವಾಗ, ಇನ್ನು ಎಲ್ಲರೂ ಉತ್ತಮರಾದರೆ ಹೇಗಿರಬೇಡ? ಅರಿಷಡ್ವರ್ಗಗಳಿಗೆ 'ಬೈ' ಅನ್ನೋಣ...... ಕಾಯಾ, ವಾಚಾ, ಮನಸಾ ಶುದ್ಧರಾಗೋಣ...... ಒಳ್ಳೆಯದನ್ನು ಮಾಡಲಾಗದಿದ್ದರೂ, ಕೆಟ್ಟ ವಿಚಾರಗಳಿಂದ ದೂರವಿರೋಣ........ಧರ್ಮ,ಅರ್ಥ, ಕಾಮ, ಮೋಕ್ಷಗಳನ್ನು ಹೊಂದೋಣ..........ನಿಜಾರ್ಥದಲ್ಲಿ ಸ್ವತಂತ್ರರಾಗೋಣ.....................ಸ್ವಾತಂತ್ರ್ಯದ ಶುಭಾಶಯಗಳು.................


Friday, 5 August 2011

ಉಳ್ಳವರು ಶಿವಾಲಯವ ಮಾಡುವರು...................

ಒಂದು ಕಾಡಿನಲ್ಲಿ ಆನೆ ಮತ್ತು ಇಲಿಗಳಿಬ್ಬರು ಗೆಳೆಯರಾಗಿದ್ದರು.ಅವರು ಹೇಗೆ ಗೆಳೆಯರಾದರು ಎಂಬುವುದು ಇಲ್ಲಿ ಮುಖ್ಯವಲ್ಲ.ಇಬ್ಬರೂ ಅನ್ಯೋನ್ಯವಾಗಿದ್ದರು.ಅದರೂ ಇಲಿಗೆ ಆನೆಯ ದೈತ್ಯ ದೇಹದ ಮೇಲೇ ಕಣ್ಣು. ಆನೆ ಲದ್ದಿ ಹಾಕುತ್ತದೆ, ತನಗೆ ಯಾಕೆ ಇದು ಸಾಧ್ಯವಿಲ್ಲವೆಂದು ಇಲಿ ಪ್ರತಿದಿನ ಚಿಂತಿಸುತಿತ್ತು. ತಾಲೂ ಲದ್ದಿ ಹಾಕಬೇಕೆಂದು ಹಲವಾರು ಪ್ರಯತ್ನಗಳನ್ನೂ ಮಾಡಿತು.ಕೊನೆಗೂ ಅದು ಸಫಲವಾಗಲೇ ಇಲ್ಲ.ಇದರಿಂದ ಜಿಗುಪ್ಸೆಗೊಂಡು ಇಲಿ 'suicide' ಮಾಡಿಕೊಂಡಿತಂತೆ.

ಇಂದು ನಾವು ಅನುಕರಣೆಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಒಬ್ಬರಂತೆ ಇನ್ನೊಬ್ಬರಾಗಳು ಪ್ರಯತ್ನಿಸುತ್ತಿದ್ದೇವೆ. ಈ ಪ್ರಯತ್ನದಲ್ಲಿ ಸತ್ಯತೆಯನ್ನು ತಿಳಿಯಲು ಸಾಧ್ಯವಾಗದೆ ದೊಡ್ಡ ಪ್ರಪಾತದಲ್ಲಿ ಬೀಳುತಿದ್ದೇವೆ. ನಾವೆಂದೂ ನಮ್ಮ ಸ್ಥಿತಿ-ಗತಿ, ಆರ್ಥಿಕ ಮಟ್ಟ, ಸಾಮರ್ಥ್ಯ, ಸಂಪ್ರದಾಯಗಳ ಬಗ್ಗೆ ಚಿಂತಿಸುವುದೇ ಇಲ್ಲ. ಯಾವುದೋ ಒಂದನ್ನು ಅನುಕರಿಸುತ್ತಾ ಅದನ್ನು ಪಡೆಯಲಾಗದೆ, ತಮ್ಮ ತನವನ್ನೂ ಕಳೆದುಕೊಂಡು 'ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ' ಎಂಬ ಸ್ಥಿತಿಯನ್ನು ತಲುಪುತಿದ್ದೇವೆ.

ಕಾಲೇಜಿಗೆ ಹೋಗುವ ವಿಧ್ಯಾರ್ಥಿಯೊಬ್ಬ ತನ್ನ ಶ್ರೀಮಂತ ಗೆಳೆಯನ ಬಳಿಯಿರುವ ದ್ವಿಚಕ್ರವಾಹನವನ್ನು ನೋಡಿ ತನಗೂ ಕೊಡಿಸುವಂತೆ ಹೆತ್ತವರಲ್ಲಿ ದುಂಬಾಲು ಬೀಳುತ್ತಾನೆ. ಶಿಕ್ಷಣ ಕೊಡಿಸುವುದೇ ದುಸ್ಥಿರವಾಗಿರುವಾಗ ಆ ತಂದೆ-ತಾಯಿ ಮಗನ ಆಸೆಯನ್ನು ಹೇಗೆ ತಾನೇ ಪೂರೈಸಲು ಸಾಧ್ಯ? ಅದೇ ಕಾಲೇಜಿಗೆ ಹೋಗುವ ಇನ್ನೊಬ್ಬ ವಿದ್ಯಾರ್ಥಿಯು ಸದಾ 'ಗರ್ಲ್ ಫ್ರೆಂಡ್' ಗಳಿಂದ ಸುತ್ತುವರಿದಿರುವ ತನ್ನ ಗೆಳೆಯನೊಬ್ಬನನ್ನು ನೋಡಿ ಆಕರ್ಷಣೆಯೋ ಪ್ರೀತಿಯೋ ತಿಳಿಯದೆ ಯಾವುದೊ ಹುಡುಗಿಯ ಮೋಹ ಪಾಶದಲ್ಲಿ ಸಿಲುಕಿ ಕೊನೆಗೆ ಅವಳು ಕೈ ಕೊಟ್ಟಾಗ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಾದಾ ಕಚೇರಿಯಲ್ಲಿ ಕೆಲಸ ಮಾಡುವಂತಹ ಗುಮಾಸ್ತನೊಬ್ಬನು, ತನ್ನ ಸಂಬಂಧಿಯೊಬ್ಬ ಕಟ್ಟಿಸಿದ ಐಶರಾಮಿ ಬಂಗಲೆಯಿಂದ ಪ್ರೇರಿತನಾಗಿ ಅದೇ ರೀತಿಯ ಮನೆಯನ್ನು ಕಟ್ಟಿಸಲು ಮನ ಮಾಡುತ್ತಾನೆ. ಮೈತುಂಬಾ ಸಾಲ ಮಾಡಿ, ಮನೆ ಕಟ್ಟಿ ಬರ್ಜರಿಯಾಗೆ ಗೃಹ ಪ್ರವೇಶ ಮಾಡುತ್ತಾನೆ. ಬಳಿಕ ಸಾಲಗಾರರ ಬಾಧೆ ತಾಳಲಾರದೆ ಅದೇ ಮನೆಯಲ್ಲಿ ನೇಣಿಗೆ ಶರಣಾಗುತ್ತಾನೆ. ಹೀಗೆ ಅನುಕರಣೆಯನ್ನು ಅಪ್ಪಿಕೊಂಡು ಹಾಳಾದವರೇ ಬಹಳ.

ಬ್ರಿಟೀಷರು ಭಾರತಕ್ಕೆ ಬಂದು ಆಳ್ವಿಕೆ ಆರಂಭಿಸಿದಾಗ, ಇಡೀ ದೇಶವೇ ಅವರ ವಿರುದ್ಧ ಹೋರಾಡಿತು.ಅವರು ಎಷ್ಟೇ ಕಾಟ ಕೊಟ್ಟರೂ ನಮ್ಮಲ್ಲಿ ಕೆಲವರು ಅವರ ಸೂಟು-ಬೂಟು, ಶೀಮಂತಿಕೆ, ಭಾಷೆಯಿಂದ ಪ್ರೇರಿತರಾಗಿ ಅವರಿಗೇ ಜೈ ಎನ್ನುತ್ತಾ ಅತ್ಯುತ್ತಮ ಹುದ್ದೆಗೆ ಏರಿಬಿಟ್ಟರು. ಇಂದು ಕೂಡ ನಮ್ಮಲ್ಲೇ ಮೆಕಾಲೆಯ ಮಕ್ಕಳು ಅನೇಕರಿದ್ದಾರೆ. ಆ ಕಡೆ ಆ ಸಂಸ್ಕೃತಿಯನ್ನು ಪೂರ್ತಿಯಾಗಿ ಅಪ್ಪಿಕೊಳ್ಳಲಾಗದೆ, ಇತ್ತ ಅಪ್ಪಟ ಭಾರತೀಯರೂ ಆಗಿರದೆ, ದೇಶಿಯೂ ಅಲ್ಲ ವಿದೇಶಿಯೂ ಅಲ್ಲದಂತೆ ಬದುಕುತ್ತಿದ್ದಾರೆ.ಮನೆ ಮನೆಗಳಲ್ಲಿ ಉಪ್ಪಿಟ್ಟು ತಿಂದು, ಮೀಟಿಂಗು ನಡೆಸಿ ಶಕ್ತಿ ಶಾಲಿಯಾಗಿ ಅಧಿಕಾರಕ್ಕೇರಿದ ಶಿಸ್ತಿಗೆ ಹೆಸರಾಗಿದ್ದ ರಾಜಕೀಯ ಪಕ್ಷವೊಂದು, ಬಳಿಕ ಗಣಿ ಧಣಿಗಳ ಧನದಿಂದ ಉತ್ತೆಜನಗೊಂದು ರೆಸಾರ್ಟ್ ಸಂಸ್ಕೃತಿಗೆ ಶರಣಾಗಿ, ಅಶಿಸ್ತನ್ನು ಮೈಗೂಡಿಸಿಕೊಂಡು ಎರಡು ಬಣಗಳಾಗಿ ಈಗ ಜನತೆಯ ಮೂದಲಿಕೆಗೆ ಒಳಗಾಗಿರುವ ಉದಾಹರಣೆಯೂ ನಮ್ಮ ಮುಂದಿದೆ.

ಪರಮ ಶಕ್ತನಾದ ಪರಮಾತ್ಮನೇ ಇರಲಿ, ಇಲ್ಲ ವಿಜ್ಞಾನ ಹೇಳುವಂತೆ ಜೀವವಾಹಿನಿ (ಜೀನ್ಸ್) ಗಳೇ ಆಗಿರಲಿ, ಪ್ರತಿಯೊಬ್ಬ ಮನುಷ್ಯನಿಗೆ ಪ್ರತ್ಯೇಕವಾದ ರೂಪ-ಗುಣ-ಶಕ್ತಿ ನೀಡಲಾಗಿದೆ.ಇಲ್ಲಿ ಪ್ರತಿಯೋರ್ವನೂ ತನ್ನದೇ ರೀತಿಯಲ್ಲಿ ಸಶಕ್ತನಾಗಿದ್ದಾನೆ. ಅವನದೇ ರೀತಿಯಲ್ಲಿ ಸಫಲತೆಯನ್ನು ಪಡೆಯುವ ಅವಕಾಶ, ಸಾಮರ್ಥ್ಯ ಹಾಗು ಹಕ್ಕನ್ನು ಪಡೆದಿದ್ದಾನೆ. ಹೀಗಿದ್ದರೂ ಏನೂ ಗೊತ್ತೇ ಇಲ್ಲದಂತೆ ಇನ್ನೊಬ್ಬರಿಂದಲೇ ಋಣಾತ್ಮಕವಾಗಿ ಪ್ರಭಾವಿತನಾಗುತಿದ್ದಾನೆ. ಧನಿಕ ವರ್ಗಗಳಿಂದ ನಡೆಸಲ್ಪಡುತಿದ್ದ ಹೋಮ-ಹವನ, ಪೂಜಾ-ಪುನಸ್ಕಾರ, ದೇವಾಲಯಗಳಿಂದ ವಿಚಲಿತರಾಗದೆ ಜಗಜ್ಯೋತಿ ಬಸವೇಶ್ವರರು 'ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯ' ಎಂದು ಅಂದೇ ಹೇಳಿದ್ದಾರೆ.ತಾನು ಬಡವ ದೈವ ಪೂಜೆ ಹೇಗೆ ಮಾಡಲಿ ಎಂದು ಯೋಚಿಸುವುದರ ಬದಲು ತಮ್ಮ ದೇಹವೆಂಬ ದೇಗುಲದ, ಹೃದಯವೆಂಬ ಗರ್ಭಗೃಹದಲ್ಲಿ ಆ ಪರಮಾತ್ಮನನ್ನು ಪ್ರತಿಷ್ಠಾಪಿಸಲು ಸೂಚಿಸಿದ್ದಾರೆ.

ಇಷ್ಟೆಲ್ಲಾ ಅಂದ ಮೇಲೇ ಅನುಕರಣೆ ತಪ್ಪೇ? ಇನ್ನೊಬ್ಬರಿಂದ ಪ್ರೇರಿತರಾಗಿ ಉತ್ತಮ ಸ್ಥಾನವನ್ನು ಸಂಪಾದಿಸುವುದು ಕೆಟ್ಟ ವಿಚಾರವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಖಂಡಿತವಾಗಿಯೂ ಇದು ತಪ್ಪಲ್ಲ. ನಿಜ ಹೇಳಬೇಕೆಂದರೆ, ಉತ್ತಮ ರೀತಿಯಲ್ಲಿ ಅನುಕರಣೆ ಮಾಡುವುದನ್ನು ನಮಗೆ ಕಲಿಸಿಯೂ ಇಲ್ಲ ನಾವು ಕಲಿತೂ ಇಲ್ಲ. ನಾವು ಋಣಾತ್ಮಕವಾಗಿ ಪ್ರೇರಣೆಗೆ ಒಳಗಾಗುತ್ತೆವೆಯೇ ಹೊರತು, ಧನಾತ್ಮಕವಾಗಿಯಲ್ಲ. ನಾವು ಇನ್ನೊಬ್ಬರಲ್ಲಿರುವ ಭೋಗ್ಯ ವಸ್ತುಗಳನ್ನು ನೋಡುತ್ತೇವೆ ಬದಲಾಗಿ, ಅವುಗಳನ್ನು ಗಳಿಸಲು ಆ ವ್ಯಕ್ತಿಯು ಉಪಯೋಗಿಸಿದ ಮಾರ್ಗವನ್ನಲ್ಲ. ನಾವು ವ್ಯಕ್ತಿಯಲ್ಲಿರುವ ಐಶ್ವರ್ಯದಿಂದ ಮತ್ತಿಗೊಳಗಾಗುತ್ತೆವೆಯೇ ಹೊರತು ಅವನ ಗುಣದಿಂದಲ್ಲ.

ಒಬ್ಬ ಕಷ್ಟಪಟ್ಟು ಓದಿ, ಉತ್ತಮ ರೀತಿಯಿಂದ ಗಳಿಸಿ ಆಸ್ತಿಯನ್ನು ಸಂಪಾದಿಸಿರಬಹುದು. ಆದರೆ ಅವನಲ್ಲಿರುವ ಆಸ್ತಿಯನ್ನು ನಾವು ಕ್ಷಣ ಮಾತ್ರದಲ್ಲೇ ಗಳಿಸಲು ಇಚ್ಚಿಸುತ್ತೆವೆಯೇ ಹೊರತು, ಅವನಂತೆ ಕಷ್ಟಪಡಲು ತಯಾರಿಲ್ಲ. ಇದಕ್ಕಾಗಿ ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ನಮ್ಮ ತಲೆ ಮೇಲೇ ನಾವೇ ಚಪ್ಪಡಿ ಎಳೆದುಕೊಳುತಿದ್ದೇವೆ.ವಿದ್ಯಾರ್ಥಿಯು ದ್ವಿಚಕ್ರವಿರುವ ಗೆಳೆಯನಿಂದ ಪ್ರೆರೆಪಿತವಾಗದೆ, ಉತ್ತಮ ಅಂಕವನ್ನು ಪಡೆಯುವ ಸಹಪಾಠಿಯಿಂದ ಪ್ರೇರೇಪಿಸಲ್ಪಟ್ಟರೆ ಇವನೂ ಕೂಡ ಉತ್ತಮ ಅಂಕವನ್ನು ಪಡೆಯಲು ಸಾಧ್ಯ. ಕುಕೃತ್ಯಗಳಿಂದ ಆಸ್ತಿ ಗಳಿಸಿ ಬಳಿಕ ಜೈಲು ಪಾಲದ ಹಲವಾರು ವ್ಯಕ್ತಿಗಳ ಉದಾಹರಣೆ ನಮ್ಮ ಮುಂದಿದ್ದರೂ ಸಹ ಬರೀ ಅವರ ಆಸ್ತಿಗೆ ನಾವು ಮರುಳಾಗುತ್ತೆವೆಯೇ ಹೊರತು ಘಟನೆಯಿಂದ ಪಾಠ ಕಲಿಯಿತ್ತಿಲ್ಲ.

ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪರಿಹಾರವೆನ್ನುವುದು ಇದ್ದೆ ಇದೆ. ಬಸವಣ್ಣನವರ ವಚನವನ್ನು ಇನ್ನೊಮ್ಮೆ ಪರಿಶೀಲಿಸಿ ನೋಡೋಣ. ಪ್ರಶ್ನೆ ಉದ್ಭವವಾಗುವುದು ಶಿವಾಲಯವನ್ನು ಕಟ್ಟುವುದರಲ್ಲಿ. ಶ್ರೀಮಂತರಲ್ಲಿ ಹಣವಿದೆ. ಅವರು ಎಷ್ಟು ಆಲಯವನ್ನಾದರೂ ಕಟ್ಟಬಹುದು. ಆದರೆ ಬಡವನಾದವನು ಏನು  ಮಾಡಲು ಸಾಧ್ಯ.ಆದರೆ ಬುದ್ಧಿ ಸ್ವಲ್ಪ ಓಡಿಸಿದರೆ ಅವನೂ ದೇಹವೆಂಬ ಶಿವಾಲಯವನ್ನು ಕಟ್ಟಬಹುದು. ಹೀಗೆ ಮಾಡಿದರೆ ದೇವಾಲಯವನ್ನು ಕಟ್ಟಿಸಿದ ಹಾಗೂ ಆಯಿತು ಹಣ ಕಾಸಿಗೂ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಹೀಗೆ ನಮ್ಮ ಬುದ್ಧಿವಂತಿಕೆಯಿಂದ ನಮ್ಮ ಸಾಮರ್ಥ್ಯದಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯ. ಆನೆ ಲದ್ದಿ ಹಾಕುವುದೆಂದು ಇಲಿ ಲದ್ದಿ ಹಾಕಲು ಸಾಧ್ಯವಿಲ್ಲ. ಅದು ಬರೀ 'ಬಿಟ್ಟೆ' ಇಡಬಹುದಷ್ಟೇ. ಯಾಕೆಂದರೆ "ನೋಡಿ ಸ್ವಾಮಿ ನಾವಿರೋದೆ ಹೀಗೆ". 


Wednesday, 6 July 2011

ದ್ವಂದ್ವಗಳ ಲೋಕದಲ್ಲಿ.....................

ಸಂಸ್ಕೃತದ 'ದ್ವೇ' ಎನ್ನುವ ಸಮೂಹಕ್ಕೆ ಸೇರುವ ಪದವೇ 'ದ್ವಂದ್ವ'. ಇದು ಎರಡು ಎನ್ನುವ ಅರ್ಥವನ್ನು ಕೊಡುತ್ತದೆಯಾದರೂ ಒಂದಕ್ಕಿಂತ ಹೆಚ್ಚಾದ ಅಭಿಪ್ರಾಯ, ಗೊಂದಲ, ತುಮುಲ, ಸಂಶಯ, ಸಂದೇಹ, ಗಲಿಬಿಲಿಗಳನ್ನು ಸೂಚಿಸಲು ಈ ಪದವನ್ನು ಉಪಯೋಗಿಸುತ್ತೇವೆ.ದ್ವಂದ್ವ ಎನ್ನುವ ಶಬ್ಧದಲ್ಲೇ ಏನೋ ಅಡಗಿದೆ. ದ್ವ ವನ್ನು ಎರಡು ಸಲ ಬರೆದು ಮಧ್ಯದಲ್ಲಿ ಸೊನ್ನೆ (ಶೂನ್ಯ-ಏನೂ ಇಲ್ಲ) ಸೇರಿಸಿದರೆ ಸಿಗುವ ಪದದ ಉಚ್ಚಾರಣೆಯಲ್ಲೇ ಏನೋ ಇದೆ. ದ್ವಂದ್ವವು ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಇರಬಹುದು ಅಥವಾ ವ್ಯಕ್ತಿಯೊಬ್ಬನ ಮನಸ್ಸಿನೊಳಗೆನೆ ದ್ವಂದ್ವವಿರಬಹುದು. ನಾನೂ ಕೂಡ ಬರೆಯಬೇಕೋ, ಬೇಡವೋ ಎನ್ನುವ ದ್ವಂದ್ವದೊಂದಿಗೆ ಈ ಬ್ಲಾಗನ್ನು ಮುಂದುವರಿಸುತಿದ್ದೇನೆ.  

ಅಭಿಪ್ರಾಯ ಬೇಧಗಳ ಜೊತೆಗೇನೆ ವ್ಯಕ್ತಿಯೊಬ್ಬನ ಜನನವಾಯಿತೆಂದರೆ ತಪ್ಪಾಗಲಾರದು. ತಮಗೊಂದು ಮಗು ಬೇಕೋ, ಬೇಡವೋ ಎಂಬ ಸಂಶಯದೊಂದಿಗೆನೆ ವ್ಯಕ್ತಿಯೊಬ್ಬನ ಜೀವನದಲ್ಲಿ ದ್ವಂದ್ವವು ಪ್ರವೇಶ ಪಡೆಯುತ್ತದೆ. ವ್ಯಕ್ತಿಯೊಬ್ಬನಿಗೆ ಐಡೆಂಟಿಟಿ ಯನ್ನು ನೀಡುವ ಹೆಸರು ಕೂಡ ಗೊಂದಲದಿಂದಲೇ ಕೂಡಿರುತ್ತದೆ. ಮಗ ಅಥವಾ ಮಗಳಿಗೆ ನಕ್ಷತ್ರದ ಹೆಸರನ್ನಿಡುವುದೋ?  ಮಾಡರ್ನ್ ಹೆಸರಿಡುವುದೋ? ಅಥವಾ ಅಜ್ಜ- ಅಜ್ಜಂದಿರ ಹೆಸರನ್ನು ಪುನ: ನಾಮಕರಣ ಮಾಡುವುದೋ? ಎಂಬ ಗಲಿಬಿಲಿಯೊಂದಿಗೆನೆ ಯಾವುದೊ ಹೆಸರಿಡಲಾಗುತ್ತದೆ. ಮುಂದೆ ಅದೇ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ವ್ಯಕ್ತಿಯು  ಆ ಹೆಸರಿನಿಂದ ಗಲಿಬಿಲಿಗೊಳ್ಳುವ ಸಾಧ್ಯತೆಯೂ ಇದೆ. ತನ್ನ ಹೆಸರಿನಲ್ಲಿ ಅಪಹಾಸ್ಯ ಅಡಗಿದೆಯೋ? ಯಾವ ರೀತಿಯಲ್ಲಿ ಉಳಿದವರು ತನ್ನ ಹೆಸರನ್ನು ಸ್ವೀಕರಿಸುತ್ತಾರೆ? ಎನ್ನುವ ತುಮುಲದಿಂದ ತಮ್ಮ ಹೆಸರನ್ನು ಬದಲಾಯಿಸಿದವರೂ ಇದ್ದಾರೆ.

ಇಂದಿನ ಯುಗದಲ್ಲಿ ತಮ್ಮ ಮಕ್ಕಳನ್ನು ಶಾಲೆಗೇ ಸೇರಿಸುವುದೂ ಸುಲಭದ ಮಾತಲ್ಲ. ಡೊನೆಶನ್ ಹಾವಳಿ ಒಂದು ಕಡೆಯಾದರೆ ಆ ಶಾಲೆ ಉತ್ತಮ ಹೌದೋ-ಅಲ್ಲವೋ? ಕನ್ನಡ ಶಾಲೆಗೇ ಮಗನನ್ನು ಸೇರಿಸಿದರೆ ತನ್ನ ಘನತೆಗೆ ಏನಾಗುವುದೋ? ಮನೆಯ ಪಕ್ಕದ ಶಾಲೆಯಲ್ಲಿ ಪ್ರವೇಶ ಸಿಗುವುದೋ-ಇಲ್ಲವೋ? ಒಂದುವೇಳೆ ನೆಚ್ಚಿನ ಶಾಲೆಯಲ್ಲಿ ಪ್ರವೇಶ ಸಿಕ್ಕಿಲ್ಲವಾದರೆ ಹೇಗೆ? ಹೀಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ.

ಮುಗ್ಧ ಮನಸ್ಸಿನ ಮಕ್ಕಳ ಮನದಲ್ಲೂ ಸಹ ನೂರಾರು ಪ್ರಶ್ನೆಗಳು ಎದ್ದೇಳುತ್ತವೆ. ಸಿಗರೇಟು-ಕುಡಿತ ಒಳ್ಳೆದಲ್ಲವೆಂದು ಹೇಳಿ ಮಕ್ಕಳ ಎದಿರೇ ಕುಡಿಯುವ ತಂದೆ, ಕಳ್ಳತನ ಒಳ್ಳೆಯದಲ್ಲವೆಂದರೂ ಏನಾದರೂ ಕದ್ದು ತಂದಾಗ ಪ್ರೋತ್ಸಾಹಿಸುವ ತಾಯಿ, ಸುಳ್ಳು ಹೇಳಬಾರದೆಂದು ಸುಳ್ಳಲ್ಲೇ ಮನೆ ಕಟ್ಟುವ ಗುರು, ಎಷ್ಟು ಉತ್ತಮ ಅಂಕವನ್ನು ಪಡೆದರೂ ಇತರ ಸಹಪಾಟಿಗಳೊಂದಿಗೆ   ತುಲನೆ ಮಾಡಿ ಸಿಗುವ ಮೂದಲಿಕೆ...... ಇವುಗಳನೆಲ್ಲ ಕಂಡ ಸ್ವಚ್ಚ ಮನಸ್ಸಿಗೆ ಯಾವುದು ಸರಿ? ಯಾವುದು ಸುಳ್ಳು ಎಂಬ ಸಂಶಯ ಬಂದೆ ಬರುತ್ತದೆ.

ಉನ್ನತ ಶಿಕ್ಷಣದ ನಿರ್ಧಾರವೂ ಕೂಡ ಗಲಿಬಿಲಿಯಿಂದ ಕೂಡಿದ್ದಾಗಿದೆ. ಯಾವ ಶಿಕ್ಷಣ ಉತ್ತಮ? ಯಾವುದರಲ್ಲಿ ಅಧಿಕ ಗಳಿಕೆ? ಸ್ನೇಹಿತ ಯಾವ ಕೋರ್ಸನ್ನು ಆಯ್ಕೆ ಮಾಡಿದ್ದಾನೆ? ತಂದೆ ತಾಯಿಗಳು ಶಿಕ್ಷಣದ ಖರ್ಚನ್ನು ಹೊರಲು ತಯಾರಿದ್ದಾರೋ? ಇಲ್ಲವಾದರೆ ಗತಿಯೇನು? ಯಾವ ಬ್ಯಾಂಕಿಗೆ ಮೊರೆ ಹೋಗಬಹುದು? ಸೀಟೇ ಸಿಕ್ಕಿಲ್ಲವಾದರೆ ಮುಂದಿನ ಗತಿಯೇನು?...ಹೀಗೆ ಪ್ರಶ್ನೆಗಳ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇನ್ನು ಉದ್ಯೋಗ ಹುಡುಕುವುದಂತೂ ಗೊಂದಲದ ಗೂಡೇ ಆಗಿದೆ. ಉದ್ಯೋಗವನ್ನು ಪುರುಷ ಲಕ್ಷಣವೆಂದಿದ್ದಾರೆ. ಆದರೆ ಇಂದು ಸ್ತ್ರೀ ಲಕ್ಷಣದಲ್ಲೂ ಉದ್ಯೋಗ ಸೇರ್ಪಡೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಸಿಗುವುದೋ-ಇಲ್ಲವೋ? ಸಿಕ್ಕಿದರೆ ನೆಚ್ಚಿನ ಕಂಪೆನಿಯಲ್ಲಿ ಸಿಕ್ಕುವುದೋ?ಎಷ್ಟು ಸಂಬಳ ಸಿಕ್ಕಬಹುದು? ಸಿಕ್ಕಿಲ್ಲವೆನ್ದದಾದರೆ ಏನು ಮಾಡುವುದು? ಹೀಗೆ ಯೋಚನೆಯ ಹೊಳೆಯೇ ಹರಿದು ಬಿಡುತ್ತದೆ. ಏನೋ ಮಾಡಿ ಹೇಗೋ ಸರಕಾರೀ ವಲಯದಲ್ಲಿ ಅಥವಾ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಗುತ್ತದೆಂದು ತಿಳಿದುಕೊಳ್ಳೋಣ. ಆದರೂ ನಮ್ಮ ಪ್ರಶ್ನೆಗಳ ಗೂಡು ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಬಾಸನ್ನು ಹೇಗೆ ಖುಷಿ ಪಡಿಸುವುದು? ಹೇಗೆ ಭಡ್ತಿ ಪಡೆಯುವುದು? ಗಳಿಕೆಯನ್ನು ಏರಿಸುವುದು ಹೇಗೆ? ಲಂಚ ಪಡೆಯಲು ಏನಾದರು ಅವಕಾಶವಿದೆಯಾ? ಲಂಚ ಪಡೆದುಕೊಳ್ಳುವಾಗ ಸಿಕ್ಕಿಬಿದ್ದರೇನು ಗತಿ? ಜೈಲಿನಿಂದ ಹೊರಬರುವ ಪರಿಯೇನು? ..ಹೀಗೆ ಮನದಲ್ಲಿ ಹಲವಾರು ಪ್ರಶ್ನಾರ್ಥಕ ಚಿಹ್ನೆಗಳು.

ವಿವಾಹ ಸ್ವರ್ಗದಲ್ಲಿ ನಿಸ್ಚ್ಯವಾಗುವುದಂತೆ. ಅದರೂ ಈ ಭೂಮಿಯಲ್ಲಿ ವಿವಾಹವಾಗುವ ನಿರ್ಧಾರ ತೆಗೆಯುವ ಮೊದಲೂ ಕೂಡ ಹಲವಾರು ದ್ವಂದ್ವಗಳನ್ನು ದಾಟಿಯೇ ಬರಬೇಕು. ಹಿರಿಯರು ನಿಶ್ಚಯಿಸಿದ ಮದುವೆಯಾದರೆ ಓಕೆ.. ಇಲ್ಲ ಪ್ರೆಮವಿವಾಹವಾದರೆ ಅದನ್ನು ಹೆತ್ತವರು ಸ್ವೀಕರಿಸುವರೋ? ಇಲ್ಲವಾದರೆ ಮುಂದೇನು? ಮದುವೆಗೆ ಒಟ್ಟು ಎಷ್ಟು ಖರ್ಚಾಗಬಹುದು? ಹಣ ಹೇಗೆ ಒಟ್ಟು ಗೂಡಿಸಬಹುದು? ಮದುವೆಯಲ್ಲಿ ಎಷ್ಟು ಉಡುಗೊರೆಗಳು ಸಿಕ್ಕಬಹುದು? ಬಂದಂತಹ ಹೆಣ್ಣು ಮನೆ ಬೆಳಗುವಳೋ? ಇಲ್ಲ ಸುಡು ವಳೋ? ಎಂಬ ಸಂದೇಹ ಮನದಲ್ಲಿ. ಈ ಎಲ್ಲ ಕಷ್ಟವನ್ನು ತಿಳಿದೇ ನಮ್ಮ ಹಿರಿಯರು ಹೇಳಿರಬೇಕು, 'ಮನೆ ಕಟ್ಟಿ ನೋಡು, ಮಾಡುವೆ ಮಾಡಿ ನೋಡು"

ಮನಸ್ಸಿನ ದ್ವಂದ್ವದ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಮುಗಿಯದ ಅಧ್ಯಾಯ.ಜೀವನದ ಪ್ರಮುಖ ಹಂತಗಳಲ್ಲಿ ನಾವು ಹೇಗೆ ತುಮುಲಗಳಿಗೆ ಒಳಗಾಗುತ್ತೆವೆಯೋ  ಹಾಗೆಯೇ ಪ್ರತಿ ದಿನ, ಪ್ರತಿ ನಿಮಿಷ, ಚಿಕ್ಕ-ಪುಟ್ಟ ವಿಷಯಕ್ಕೂ ನಾವು ಗೊಂದಲಕ್ಕೊಳಗಾಗುತ್ತೇವೆ.ನಮ್ಮ ಹುಚ್ಚು ಮನಸ್ಸು, ಫಲ-ಪ್ರತಿಫಲ, ಲಾಭ-ನಷ್ಟ ಗಳ ಬಗ್ಗೆ ಲೆಕ್ಕ ಹಾಕುತ್ತಲೇ ಇರುತ್ತದೆ. ದ್ವಂದ್ವಗಲಿಗೊಳಗಾಗುವ ನಮ್ಮ ಮನಸ್ಸಿಗೆ, ಬುದ್ಧಿಗೆ ನಿರ್ಧಾರವನ್ನು ತೆಗೆದು ಕೊಳ್ಳುವ ಶಕ್ತಿಯನ್ನೂ ಆ ಪರಮಾತ್ಮ ನಮಗೆ ನೀಡಿದ್ದಾನೆ. ಇಲ್ಲವಾದರೆ ಈ ಜಗತ್ತೇ ಒಂದು ಹುಚ್ಚರ ಸಂತೆಯಾಗಿ ಬಿಡುತಿತ್ತು. ಸಮಯಕ್ಕನುಗುಣವಾಗಿ ಏನೋ ನಿರ್ಧಾರವನ್ನು ತೆಗೆದುಕೊಂಡ ನಾವು ಜೀವನವನ್ನು ಸಮತೂಗಿಸುತ್ತಿದ್ದೇವೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ದ್ವಂದ್ವಕ್ಕೊಳಗಾದವರೇ ಹಾಗು ಒಳಗಾಗುತ್ತಿರುವವರೇ. ಆದರೂ ಯಾರು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅವರು ಜಯವನ್ನು ಪಡೆಯುತ್ತಾರೆ.ನಿರ್ಧಾರವನ್ನು ತೆಗೆದುಕೊಲ್ಲದವರು ಅಥವಾ ತಪ್ಪು ನಿರ್ಧಾರ ಕೈಗೆತ್ತಿ ಕೊಳ್ಳುವವರು ಸೋಲನ್ನು ಅನುಭವಿಸುತ್ತಾರೆ. ಉಳಿದವರು ಹೇಗೋ ಸಮತೂಗಿಸಿಕೊಂಡು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾರೆ.ಸಮಯ,ವಸ್ತು, ವಿಷಯ, ಘಟನೆಯನ್ನು ನೋಡಿಕೊಂಡು ನಿರ್ಧಾರ ತೆಗೆಯುವುದು ಕೂಡ ಕಷ್ಟದ ಕೆಲಸವೇ ಅದರೂ ಸಹ ದ್ವಂದ್ವಗಳ ಲೋಕದಲ್ಲಿ ವಾಸಿಸುವ ನಾವು ಅದರ ವಿಶಾಲತೆಯನ್ನು ಕುಗ್ಗಿಸಲು ಪ್ರಯತ್ನಿಸೋಣ.........

  

Sunday, 26 June 2011

ಋಣಾನುಬಂಧ ರೂಪೇಣ..................

ಸಾಧಿಸಿದರೆ ಸಬಳ ನುಂಗಬಹುದಂತೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಬರಿ ಹುಲ್ಲು ಕಡ್ಡಿಯನ್ನೂ ನುಂಗಲು ಸಾಧ್ಯವಾಗುತ್ತಿಲ್ಲ. ಒಬ್ಬ ಪ್ರಯತ್ನಪಟ್ಟು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಂಡರೆ, ಅವನಷ್ಟೇ ಪ್ರಯತ್ನಪಟ್ಟ ಇನ್ನೋರ್ವನಿಗೆ ಶಿಕ್ಷಣ-ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಒಬ್ಬ ನಟನ ಚಲನಚಿತ್ರ ನೂರು ದಿನ ಓಡಿದರೆ, ಅವನಿಗಿಂತ ಸ್ವಲ್ಪ ಹೆಚ್ಚೇ ಪ್ರತಿಭೆಯನ್ನು ಹೊಂದಿರುವ ಇನ್ನೊಬ್ಬ ನಟನ ಚಿತ್ರವು ಮೂರು ದಿನಕ್ಕೇ ಮುಗ್ಗರಿಸಿ ಬಿಡುತ್ತದೆ. ವ್ಯಾಪಾರಿಯೊಬ್ಬ ಯಾವುದೇ ಕಷ್ಟ ಪಡದೆ ಗಿರಾಕಿಗಳನ್ನು ಗಿಟ್ಟಿಸಿಕೊಂಡು ಲಾಭ ಮಾಡುತ್ತಿದ್ದರೆ, ಅದೇ ಏರಿಯಾದಲ್ಲಿರುವ ಇನ್ನೊಬ್ಬ ವ್ಯಾಪಾರಿಯು ಗಿರಾಕಿಗಳನ್ನು ಸಳೆಯಲು ಏನೆಲ್ಲಾ ಮ್ಯಾಜಿಕ್ಕುಗಳನ್ನು  ಮಾಡಿದರೂ ವ್ಯಾಪಾರವಾಗುತಿಲ್ಲ.ಇದನೆಲ್ಲ ನೋಡಿದಾಗ, ನಮ್ಮ ಸ್ವಪ್ರಯತ್ನದ ನಡುವೆಯೂ ಯಾವುದೊ ಒಂದು ಕಾಣದ ಕೈ ನಮ್ಮ ಸಾಧನೆಯನ್ನು ನಿಯಂತ್ರಿಸುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಕಾಣದ ಕೈಯನ್ನು ನಮ್ಮವರು ಭಗವಂತ, ಅದೃಷ್ಟ, ಪರಮಾತ್ಮ,ಲಕ್, ಗಾಡ್ ಹೀಗೆ ಅನೇಕ ಹೆಸರುಗಳಿಂದ ಗುರುತಿಸುತ್ತಾರೆ.

ಪರದೆಯ ಹಿಂದಿರುವ ಸೂತ್ರಧಾರನ ಅಸ್ತಿತ್ವವನ್ನು ತಿಳಿದೇ, ನಾನಿದ್ದೇನೆ ನಾನಿದ್ದೇನೆ.. ಹೆದರಬೇಡಿ ಎಂದೆನ್ನಿತಿದ್ದ ವೈದ್ಯನೊಬ್ಬ  ಶಸ್ತ್ರಚಿಕಿತ್ಸೆ ಮಾಡುವ ಮೊದಲು ಮೇಲೆ ನೋಡಿ ನಮಸ್ಕರಿಸುತ್ತಾನೆ. ವರ್ಷಪೂರ್ತಿ ಏನೂ ಓದದೆ ಪರೀಕ್ಷೆಯ ಹಿಂದಿನ ದಿನ ರಾಮ-ಕೃಷ್ಣರ ಫೋಟೋಗಳನ್ನು ಪುಸ್ತಕದೆಡೆಯಲ್ಲಿ ಇಟ್ಟು  ಅದರ ಮೇಲೇನೆ ನಿದ್ದೆಹೋಗಿ ಮರುದಿನ ಪರೀಕ್ಷೆಯಲ್ಲಿ ಏನೋ ಬರೆದು ಪಾಸಾದ ವಿದ್ಯಾರ್ಥಿಗಳೂ ಇದ್ದಾರೆ. ಆಧುನಿಕ ವೈಜ್ಞಾನಿಕ ಪದ್ಧತಿಯಿಂದ ತಯಾರಿಸಲಾದ ಕ್ಷಿಪಣಿಗಳನ್ನು ಉಡ್ಡಯನ   ಮಾಡಲೂ ಶುಭಶಕುನದ ಮೊರೆ ಹೋಗುತ್ತಾರೆ ಎಂದು  ಎಲ್ಲೋ ಓದಿದ ನೆನಪು. ನಮ್ಮ ಸಾಧನೆಗೆ ಅದೃಷ್ಟ ಎಷ್ಟು ಮುಖ್ಯವೋ ಋಣವೂ ಅಷ್ಟೇ ಮುಖ್ಯ. ಅದೃಷ್ಟ ಮತ್ತು ಋಣ ಒಂದೇ ಅರ್ಥವನ್ನು ನೀಡುತ್ತವೆಯಾದರೂ ಇವೆರಡರುಗಳ ಮಧ್ಯೆ ಚಿಕ್ಕ ಎಳೆಯ ವ್ಯತ್ಯಾಸವಿದೆ. ಭಾರತೀಯರ ಪ್ರಕಾರ ಋಣವೆಂದರೆ ಈ ಜನ್ಮ ಯಾ ಹಿಂದಿನ ಜನ್ಮದಲ್ಲಿ ನಾವು ಮಾಡಿದ ದಾನ-ಧರ್ಮದಂತಹ ಕಾರ್ಯದಿಂದ ಪಡೆದ ಪುಣ್ಯವೇ  ಆಗಿದೆ. ನಾವು ಈ ಜನ್ಮದಲ್ಲಿ ಪಡೆಯಲಿರುವ ಶಾಂತಿ-ಅಶಾಂತಿ, ಸುಖ-ದುಖ, ಉತ್ತಮ ಸ್ಥಾನ-ನೀಚ ಸ್ಥಾನಕ್ಕೆ ಈ ಪುಣ್ಯವೇ ಕಾರಣವಾಗಿರುತ್ತದೆ. ಇದನ್ನೇ ಮುಂದುವರಿಸಿ, 'ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ'  ಎಂದಿದ್ದಾರೆ.  

ಕೆಲವರು ಮುಟ್ಟಿದೆಲ್ಲಾ ಚಿನ್ನವಾಗುತಿದ್ದರೆ, ಇನ್ನು ಕೆಲವರು ಚಿನ್ನವನ್ನು ಮುಟ್ಟಿದರೂ ಅದು ಕಬ್ಬಿಣವಾಗುತ್ತಿದೆ. ಇಲ್ಲಿ ನಮ್ಮ ಅದೃಷ್ಟ-ಪುಣ್ಯ ಕೆಲಸಮಾಡುತ್ತಿವೆ. ಜೀವನದಲ್ಲಿ ಉತ್ತಮ ಸಂಗಾತಿಯನ್ನು ಪಡೆಯುವುದು ಕೂಡ ನಮ್ಮ ಪುಣ್ಯದಿಂದಂತೆ. ಪ್ರೇಮ ವಿವಾಹ ಮತ್ತು ನಿಶ್ಚಯಿಸಿದ ವಿವಾಹದ ಮಧ್ಯೆ ಅನೇಕ ವರ್ಷಗಳಿಂದಲೂ ಘರ್ಷಣೆ ನಡೆಯುತ್ತಾ ಬಂದಿದೆ. ಕೆಲವರ ಪ್ರಕಾರ ಪ್ರೇಮ ವಿವಾಹದಿಂದ ಪರಸ್ಪರ ಚೆನ್ನಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆಯಂತೆ. ಹೀಗೆ ಅನೇಕ ವರ್ಷಗಳಿಂದ ಅರ್ಥೈಸಿಕೊಂಡು ಮದುವೆಯಾದ ಗಂಡ/ಹೆಂಡತಿ ತನ್ನ ಪ್ರಿಯತಮೆ/ಪ್ರಿಯಕರ ನೊಂದಿಗೆ ಓಡಿಹೋದ ಪ್ರಸಂಗಗಳಿವೆ. ಹಿರಿಯರು ನಿರ್ಧರಿಸಿದ ಮದುವೆಯೂ ಮುರಿದು ಬಿದ್ದ ಘಟನೆಗಳಿಗೂ ನಮ್ಮ ಸಮಾಜ ಸಾಕ್ಷಿಯಾಗಿವೆ. ಎಷ್ಟೇ ಪ್ರಯತ್ನ ಪಟ್ಟರೂ ಹಲವು ಸಲ ನಾವು ನಮ್ಮ ಸಹಚರ/ಸಹಚಾರಿಣಿಯನ್ನು ಮನವೊಲಿಸುವಲ್ಲಿ ವಿಫಲರಾಗುತಿದ್ದೇವೆ. ಋಣವಿದ್ದರಷ್ಟೇ ಜೀವನಪೂರ್ತಿ ಸಂತೋಷದಿಂದ ದಾಂಪತ್ಯ ಮಾಡಲು ಸಾಧ್ಯ.

ಉತ್ತಮ ಪುತ್ರ-ಪುತ್ರಿಯರನ್ನು ಪಡೆಯಲೂ ದಂಪತಿಗಳು ಪುಣ್ಯಮಾಡಿರಬೇಕು. ಮಗ/ಮಗಳ ಸಾಧನೆಯನ್ನು ನೋಡಿ ಶಬ್ಬಾಶ್ ಎನ್ನುವ ತಂದೆ-ತಾಯಿಗಳಿದ್ದರೆ, ಇಂತಹ ಸಂತಾನ ತಮ್ಮ ಹೊಟ್ಟೆಯಲ್ಲಿ ಹೇಗಾದರೂ ಹುಟ್ಟಿತೋ ಎಂದು ಪರಿತಪಿಸುವ ಹೆತ್ತವರೂ ಇದ್ದಾರೆ. ತಮ್ಮ ಮಕ್ಕಳ ಸ್ವಭಾವವನ್ನು ತಾವೇ ತಿದ್ದಿ-ತೀಡಿ ಅವರನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತೆವೇಯೆಂದು ಹೇಳುವುದು ಸ್ವಲ್ಪ ಹಾಸ್ಯಾಸ್ಪದವಾಗುತ್ತದೆ. ಹೆತ್ತವರು ಎಷ್ಟೇ ಪ್ರಯತ್ನಪಟ್ಟರೂ ಸಮಾಜದ ಇನ್ನೂ ಅನೇಕ ವಿಷಯಗಳು ಮಕ್ಕಳ ಮೇಲೆ ಪ್ರಭಾವಬೀರುವುದರಿಂದ ಸತ್ಪುತ್ರರನ್ನು ಪಡೆಯುವುದು ಎಲ್ಲರ ಕೈಯಿಂದ ಸಾಧ್ಯವಾಗುತ್ತಿಲ್ಲ. ಇದನ್ನು ತಿಳಿದಿದ್ದರೂ ಸಹ ವಿಜ್ಞಾನಿಗಳು ಇಂದು 'ಸ್ಮಾರ್ಟ್ ಬೇಬಿ'ಯ ಸೃಷ್ಟಿಗೆ ಸಿದ್ಧತೆ ನಡೆಸುತಿದ್ದಾರೆ. ಇದರಲ್ಲಿ ಅವರು ಎಷ್ಟು ಯಶಸ್ಸನ್ನು ಪಡೆಯುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ. ಪುಣ್ಯಗಳಿಕೆ ಗಟ್ಟಿಯಾಗಿದ್ದರಷ್ಟೇ ಉತ್ತಮ ತಂದೆ -ತಾಯಿ, ಬಂಧು-ಬಳಗ, ಸ್ನೇಹಿತರನ್ನು ಪಡೆದು ಅವರೊಂದಿಗೆ ಉತ್ತಮ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ.

ಅದೃಷ್ಟ ಪುಣ್ಯಗಳಂತೆ ಗುರು-ಹಿರಿಯರ ಆಶೀರ್ವಾದ, ಗೆಳೆಯರ ಹಾರೈಕೆಗಳೂ ಅಮ್ಮ ಸಾಧನೆಯನ್ನು ನಿರ್ಧರಿಸುತ್ತವೆ. ಆದರೆ ಇವುಗಳೇ ಎಲ್ಲ ಅಲ್ಲ. ಸ್ವಪ್ರಯತ್ನವಿಲ್ಲದಿದ್ದರೆ ಎಲ್ಲವೂ ತುಚ್ಚ. ಉದಾಹರಣೆಗೆ ಒಬ್ಬ I A S ಅಧಿಕಾರಿಯಾಗಬಯಸಿದ್ದಾನೆ    ಎಂದುಕೊಳ್ಳಿ. ಅದೃಷ್ಟ, ಪುಣ್ಯ ಎಲ್ಲವೂ ಇದೆಯೆಂದು ಸುಮ್ಮನೆ ಕುಳಿತುಕೊಂಡರೆ ಅವನಷ್ಟು ಮೂರ್ಖ ಇನ್ನೊಬ್ಬನಿರಲು ಸಾಧ್ಯವಿಲ್ಲ. ಅದಕ್ಕಾಗಿ ಅವನು ಅರ್ಜಿ ಸಲ್ಲಿಸಬೇಕು, ಪುಸ್ತಕ-ವಾರಪತ್ರಿಕೆ-ದಿನಪತ್ರಿಕೆಗಳ ಮೊರೆ ಹೋಗಬೇಕು, ಹಗಲು ರಾತ್ರಿಯೆನ್ನದೆ ಕಷ್ಟ ಪಡಬೇಕು, ಸಾಧ್ಯವಾದರೆ ದೂರದೂರಿನ ಕೋಚಿಂಗ್ ಗೂ ಹೋಗಬೇಕು. ಇಷ್ಟೆಲ್ಲಾ ಆದಮೇಲೆ ಅದೃಷ್ಟ, ಆಶೀರ್ವಾದ, ಪುಣ್ಯ ಅವನ ಕೈ ಹಿಡಿದರೆ I A S ಅಧಿಕಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಪರಿಶ್ರಮ ಊಟವಾದರೆ, ಉಳಿದವುಗಳೆಲ್ಲ ಇನ್ನಿತರ ಭಕ್ಷಗಳಷ್ಟೇ. ಅವೇ ಪ್ರಮುಖವಾದರೆ ಅದು ನಮಗೆ ಮಾರಕ.

ಉತ್ತಮ ಪರಿಶ್ರಮವನ್ನು ಹಾಕೋಣ, ಉತ್ತಮ ಕಾರ್ಯಗಳಿಂದ ಪುಣ್ಯದ ಬುತ್ತಿಯನ್ನೂ ಕಟ್ಟಿಕೊಳ್ಳೋಣ, ಗುರು-ಹಿರಿಯರ ಆಶಿರ್ವಾದವನ್ನೂ ಬೇಡೋಣ. ಇದರ ಜೊತೆ ಸಹಮನಸ್ಸನ್ನು ಹೊಂದಿರುವ ಗೆಳೆಯರ ಹಾರೈಕೆಗಳೊಂದಿಗೆ ಸಾಧನೆಯ ಮೆಟ್ಟಿಲನ್ನು ಹತ್ತೋಣ. ಜೈ ಹೋ........... 

Wednesday, 22 June 2011

ಇರುವುದೆಲ್ಲವ ಬಿಟ್ಟು..............

ಮೇರೆ ಪಾಸ್ ಗಾಡಿ ಹೇ, ಬಂಗ್ಲಾ ಹೇ............ತೇರೆ ಪಾಸ್ ಕ್ಯಾ ಹೇ?
ಮೇರೆ ಪಾಸ್ ಮಾ ಹೇ...........

ಪ್ರಸಿಧ್ದ ಸಿನಿಮಾವೊಂದರ ಸಂಭಾಷಣೆಯ ತುಣುಕು ಇದು. ಇಲ್ಲಿ ಗಾಡಿ, ಬಂಗಲೆ ಎಲ್ಲಾ ಐಶ್ವರ್ಯದ ಪ್ರತೀಕವಾದರೆ, ತಾಯಿಯನ್ನು ಪ್ರೇಮದ ಪ್ರತಿರೂಪದಂತೆ ಬಿಂಬಿಸಲಾಗಿದೆ. ಪ್ರೀತಿಯನ್ನು ಯಾವುದೇ ಸುಖದ ಸುಪ್ಪತ್ತಿಗಿಂತಲೂ ಮೇಲು ಎನ್ನಲಾಗುತ್ತದೆ. ಆದರೂ ಧನ-ಕನಕ ಹಾಗು ಪ್ರೀತಿ-ಪ್ರೇಮಗಳ ಮಧ್ಯೆ ಕಲಹ ಹಲವಾರು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.

ನಮ್ಮ ಜೀವನದಲ್ಲಿ ಹಣವೇ ಎಲ್ಲ ಅಲ್ಲ. ಪ್ರೀತಿ,ಪ್ರೇಮ,ವಾತ್ಸಲ್ಯ,ಮಮತೆ ಮೊದಲಾದುವುಗಳಿಗೆ ಜಾಗವಿಲ್ಲವೆನ್ದಾದರೆ ಎಷ್ಟು ಹಣವಿದ್ದರೂ ವ್ಯರ್ಥ. ಹಣದಿಂದ ಹಾಸಿಗೆಯನ್ನು ಕೊಂಡುಕೊಳ್ಳಬಹುದು ಆದರೆ ನಿದ್ದೆಯನ್ನಲ್ಲ. ಹಣವಿದ್ದರೆ ಮನೆಯನ್ನು ಕಟ್ಟಿಸಬಹುದು ಆದರೆ ಮನಸ್ಸನ್ನಲ್ಲ. ಪ್ರೀತಿ ಪ್ರೇಮಗಳ ಗುಣಗಾನವನ್ನು ಮಾಡಿರುವ ಹಲವಾರು ಪ್ರವಚನಗಳು, ಕಾದಂಬರಿಗಳು, ಸಿನೆಮಾಗಳು ನಮ್ಮ ಮುಂದಿವೆ.

ಸರಿ, ಜೀವನದಲ್ಲಿ ಹಣ ಎಲ್ಲವೂ ಅಲ್ಲ. ಆದರೆ ಹಣವಿಲ್ಲದೆಯೂ ಏನೂ ಇಲ್ಲ. ಯಾವುದೊ ಸಿನೆಮಾದ ಸಂಭಾಷಣೆಯಂತೆ 'ಈ ಪ್ರೀತಿ ಪ್ರೇಮ..ಎಲ್ಲಾ ಪುಸ್ತಕದ ಬದನೇಕಾಯಿ'. ನಮ್ಮನ್ನು ಅತೀವ ಪ್ರೀತಿಸುವ ಮಡದಿಯೋ ಮಕ್ಕಳೋ ಯಾರೇ ಆಗಿರಲಿ ಅವರ ಹೊಟ್ಟೆ ಹೊರಲು ದುಡಿಯಲೇ ಬೇಕು. ಪ್ರೀತಿ ಪ್ರೇಮದಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ.ಹಣದಿಂದ ನಿದ್ದೆ ಖರೀದಿಸಲು ಸಾಧ್ಯವಿಲ್ಲದಿರಬಹುದು. ಆದರೆ ನಿದ್ದೆ ಬಂದಾಗ ನಿದ್ದೆ ಮಾಡಲು ಹಾಸಿಗೆ... ಕಡೆ ಪಕ್ಷ ಚಾಪೆಯಾದರೂ ಇರಲೇ ಬೇಕು. ಅದು ಕೊಳ್ಳಲು ಹಣವಂತೂ ಬೇಕೇ ಬೇಕು. ದುಡ್ಡಿನಿಂದ ಮನಸ್ಸು ಕಟ್ಟಲು ಸಾಧ್ಯವಾಗದೆ ಇರಬಹುದು, ಆದರೆ ಮನಸ್ಸು  -ಮನಸ್ಸುಗಳ ಮಿಲನವಾದನಂತರ ಜೊತೆಯಾಗಿ ವಾಸಿಸಲು ಮನೆಯಂತೂ ಇರಲೇ ಬೇಕು. ಪ್ರೀತಿ ಪ್ರೇಮಕ್ಕೆ ಜೈ ಅನ್ನುತ್ತಾ ಕಥೆಗಾರರು ಹಲವಾರು ಕಥೆ-ಕಾದಂಬರಿಗಳನ್ನು ಬರೆದಿರಬಹುದು, ಪ್ರವಚನಕಾರರು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾ ಪ್ರವಚನಗಳನ್ನು ನೀಡಿರಬಹುದು, ಅನೇಕ ಚಲನಚಿತ್ರಗಳೂ ಬಂದಿರಬಹುದು. ಆದರೆ...ಇವು ಎಲ್ಲದರ ಗುರಿ ಹಣಗಳಿಕೆಯೇ ಆಗಿರುತ್ತದೆ. ಹಣದ ಮಹತ್ವವನ್ನು ತಿಳಿದೇ ಇರಬೇಕು, ಪುರುಷಾರ್ಥಗಳಲ್ಲಿ ಅದಕ್ಕೂ ಒಂದು ಸ್ಥಾನ ಕಲ್ಪಿಸಿಕೊಡಲಾಗಿದೆ.

ಅಧುನಿಕ ಯುಗದಲ್ಲಿ ಉತ್ತಮ ಜೀವನವನ್ನು ನಡೆಸಲು ಪ್ರೀತಿ, ಪ್ರೇಮ, ಮಮತೆಗಳೆಂಬ ಸುಮಧುರ ಭಾವನೆಗಳು ಎಷ್ಟು ಅಗತ್ಯವೋ ಬ್ಯಾಂಕ್ ಬ್ಯಾಲೆನ್ಸೂ ಅಷ್ಟೇ ಜರೂರಿ.ಇವು ನಮ್ಮೆರಡು ನಯನಗಳೆನ್ದರೂ ತಪ್ಪಾಗಲಾರದು. ಒಬ್ಬ ಹುಟ್ಟುತ್ತಲೇ ಕುಬೇರನಾಗಿರಬಹುದು, ಇನ್ನೊಬ್ಬ ಕುಚೇಲ ವಂಶಸ್ಥನೆ ಆಗಿರಬಹುದು ಆದರೆ ಈ ಜಗತ್ತಿನಲ್ಲಿ ಧನ ಹಾಗು ಸ್ನೇಹ ಗಳಿಕೆಗೆ ಇಬ್ಬರಿಗೂ ಸಮಾನ ಅವಕಾಶವಿದೆ. ಕೆಲವರು ಹಣಗಳಿಕೆಯಲ್ಲಿ ಹಿಂದುಳಿದರೆ ಮತ್ತೆ ಕೆಲವರು ಪ್ರೀತಿ ಗಳಿಕೆಯಲ್ಲಿ. ಇವು ಎರಡರ ಮಧ್ಯೆ ಯಾರು ಸಮತೋಲನವನ್ನು ಕಾಯ್ದುಕೊಳ್ಳುತಾನೋ  ಅವನೇ ಸುಖಿಯಗಿರುತ್ತಾನೆ.

ಅರ್ಥಶಾಸ್ತ್ರದಲ್ಲಿ "law of scarcity " ನನ್ನನ್ನು ಬಹಳವಾಗಿ ಸೆಳೆದಂತಹ ಒಂದು ತತ್ವ. ಇದರ ಪ್ರಕಾರ ಕೊರತೆಯು (scarcity )  ಬೇಡಿಕೆಯನ್ನು (demand ) ನಿರ್ಧರಿಸುತ್ತದೆ. ಈ ತತ್ವವನ್ನು ನಮ್ಮ ಜೀವನಕ್ಕೂ ಹೋಲಿಸಿ ನೋಡಬಹುದು. ನಮ್ಮ ಜೀವನದಲ್ಲಿ ಯಾವುದಕ್ಕೆ ಕೊರತೆಯಿದೆಯೋ ಅದಕ್ಕೆ ನಾವು ಬಹಳ ಬೇಡಿಕೆಯನ್ನಿಡುತ್ತೇವೆ. ಗಂಡ ಎಷ್ಟೇ ಪ್ರೀತಿಯನ್ನು ತೋರಿಸಲಿ, ಅವನಿಗೆ ದುಡಿಮೆಯಿಲ್ಲವಾದರೆ ಯಾ ದುಡಿಮೆ ಕಡಿಮೆಯಾಗಿದ್ದರೆ ಇನ್ನೂ ಹೆಚ್ಚು ದುಡಿಯುವಂತೆ ಹೆಂಡತಿ ಪೀಡಿಸುತ್ತಾಳೆ. ಕೆಲ ಪತ್ನಿಯರು ತಮ್ಮ ಪತಿ ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಗಳಿಸಲಿ ಪ್ರೀತಿ ತೋರಿಸದ ಪತಿ ಪತಿಯೇ ಅಲ್ಲ ಎಂದು ಮೂದಲಿಸುತ್ತಾರೆ.ಒಟ್ಟಾರೆಯಾಗಿ ನಾವು ಸಮತೋಲನವನ್ನು ಕಾಪಾಡುವಲ್ಲಿ ಹಿಂದೆ ಬೀಳುತಿದ್ದೇವೆ.ಇಂದು ನಾವು ಇರುವುದನ್ನೆಲ್ಲ ಬಿಟ್ಟು ಇಲ್ಲದಿರುವುದರ ಬಗ್ಗೆ ಚಿಂತಿಸುತ್ತಿದ್ದೇವೆ.ದೂರದ ಬೆಟ್ಟವೇ ನಮಗೆ ಸುಂದರವಾಗಿ ಕಾಣುತ್ತಿದೆ.ಇದು ಬರಿ ಹಣ, ಪ್ರೀತಿಗೆ ಸೀಮಿತವಾಗಿರದೆ ಜೀವನದ ಪ್ರತಿಯೊಂದು ಹಂತದಲ್ಲೂ ಕಾಣಸಿಗುತ್ತದೆ.

ಹಳ್ಳಿಯಲ್ಲೇ ಹುಟ್ಟಿ ಬೆಳೆದ ಹೈದನೋರ್ವನಿಗೆ ಪಟ್ಟಣ ಕೈ ಬೀಸಿ ಕರೆಯುತಿದ್ದರೆ, ನಗರದಲ್ಲಿ ಉತ್ತಮ ದುಡಿಮೆಯಲ್ಲಿರುವ  ವ್ಯಕ್ತಿಯೊಬ್ಬ ಎಲ್ಲವನ್ನು ತ್ಯಜಿಸಿ ಕಾಡಲ್ಲಿ ವಾಸ ಮಾಡಲು ಮನ ಮಾಡಿದರೆ ಅಚ್ಚರಿಯೇನಿಲ್ಲ.......

ಎರಡೆರಡು i-phone ಗಳನು  ಹೊಂದಿರುವ ನನ್ನ ಒಬ್ಬ ಗೆಳೆಯನು ಅದನ್ನು ಬಳಸಿ-ಬಳಸಿ ಬೇಸರಗೊಂಡು ಅದ್ಯಾವುದೋ ಕಪ್ಪು-ಬಿಳಿ ಹ್ಯಾಂಡ್ ಸೆಟ್ಟಿಗೆ ಮೊರೆ ಹೋಗಿದ್ದಾನೆ..... 

ದೇಹ ಪೂರ್ತಿ ಮುಚ್ಚುವಷ್ಟು ಅಪ್ಪಟ ಚಿನ್ನಾಭರಣಗಳನ್ನು ಹೊಂದಿದ್ದರೂ ಶ್ರೀಮತಿಯೊಬ್ಬರು ನಕಲಿ ಆಭರಣಗಳಿಗೆ(imitation jewellery) ಮನಸೋತಿದ್ದಾರೆ......

ಇಲ್ಲೊಬ್ಬ ಪತಿರಾಯ ಸುಂದರ ಹೆಂಡತಿಯೊಬ್ಬಳು ಮನೆಯೊಳಗಿದ್ದರೂ ಇನ್ನೊಬ್ಬ ಹೆಂಗಸಿನೊಂದಿಗೆ ಸಂಬಂಧ ಹೊಂದಿದ್ದಾನೆ......  

.........ಹೀಗೆ ಹುಡುಕಿದರೆ ಹತ್ತು ಹಲವಾರು ಉದಾಹರಣೆಗಳು ಕಣ್ಣ ಮುಂದೆ ಬರುತ್ತವೆ.ಕೆಲವೊಮ್ಮೆ ಇವು ತಪ್ಪೆಂದು ಅನಿಸುವುದೇ ಇಲ್ಲ. ಯಾಕಂದರೆ ಲೈಫು ಇಷ್ಟೇನೆ....ಅಲ್ಲಲ್ಲ....ಲೈಫು ಹಿಂಗೆನೆ..........

  
  

Friday, 10 June 2011

ಮುಂಗಾರು ಮಳೆಯೇ..............

 ಹೊರಗಡೆ ಮಳೆ ಸುರಿಯುತ್ತಿದೆ. ಬಾಲವಾಡಿ, ಶಾಲೆಗಳಿಗೆ ಹೋಗುತ್ತಿರುವ ಚಿಣ್ಣರು "ಹುಯ್ಯೋ ಹುಯ್ಯೋ ಮಳೆರಾಯ......." ಎಂದು ಮಳೆಯನ್ನು ಸ್ವಾಗತಿಸುತ್ತಿದರೆ, l k g, u  k  g, ಕಾನ್ವೆಂಟ್ಗೆ ಹೋಗುತ್ತಿರುವ ಮಕ್ಕಳು "rain  rain  go  away"ಎಂದು ಮಳೆಯನ್ನು ಓಡಿಸುತಿದ್ದಾರೆ. ಇವುಗಳೆರಡು ಮುಗ್ಧ ಮನಸ್ಸಿನ ಶಿಶುಗಳ ಅಚ್ಚುಮೆಚ್ಚಿನ ಗೀತೆಗಳಾದರೂ, ಇಬ್ಬರು ಕವಿಗಳು ಇವರುಗಳ ಮೂಲಕ ತಮ್ಮ ಮನೊಇಚ್ಚೆಯನ್ನು ಪ್ರಸ್ತುತಪಡಿಸಿದ್ದಾರೆ.   

ಅಂಗ್ಲ ಕವಿಯು ಮಕ್ಕಳಿಗೆ ಶಾಲೆಗೆ ಹೋಗಲು ಅಡ್ಡಿಪಡಿಸುತ್ತಿರುವ ಮಳೆರಾಯನನ್ನು ಈ ದಿನ ಬರದೆ ಮುಂದೊಂದು ದಿನ ಬಾರಪ್ಪ ಅಂದಿದ್ದಾನೆ. ಮುಂದಿನ ದಿನವೂ ಇದೇ ಗೀತೆಯನ್ನು ಹಾಡಿದರೆ ಮಳೆರಾಯ ಯಾವಾಗ ಬರಲು ಸಾಧ್ಯ? ಆದರೆ ಕನ್ನಡ ತನದ ಸೊಗಡಿರುವ ಇನ್ನೊಂದು ಗೀತೆಯಲ್ಲಿ ಪುಟಾಣಿಗಳು, ತಮಗೆ ತೊಂದರೆಯಾದರೂ ಪರವಾಗಿಲ್ಲ ಒಣಗುತ್ತುತ್ತಿರುವ ತೋಟ, ಗದ್ದೆಗಳನ್ನು ತಂಪೆರೆಯಲು ಇನ್ನೂ ಜೋರಾಗಿ ಸುರಿ ಎಂದು  ಮಳೆಯನ್ನು ಭಿನ್ನವಿಸಿಕೊಲ್ಲುತಿದ್ದಾರೆ. ಇಲ್ಲಿ, ಆಂಗ್ಲ ಗೀತೆಯ ಮೂಲಕ ವಿದೇಶಿಯರ ಸ್ವಾರ್ಥತೆ ಪ್ರಧರ್ಶನಗೊಂದರೆ, ಕನ್ನಡ ಗೀತೆಯ ಮೂಲಕ ನಮ್ಮವರ 'ಪರೋಪಕಾರಿ' ಭಾವನೆ ಪ್ರಕಟವಾಗಿದೆ. ಭಿನ್ನತೆ ಏನೇ ಇರಲಿ, ಈ ಎರಡೂ ಗೀತೆಗಳಲ್ಲಿ ಮಳೆರಾಯನನ್ನು 'target ' ಮಾಡಲಾಗಿದೆ. 

ಚಿಕ್ಕಂದಿನಿಂದಲೂ ಮಳೆಗಾಲದ ಸವಿಯನ್ನು ಅನುಭವಿಸುತ್ತಾ ಬೆಳೆದವನು ನಾನು. ಆ ದಿನಗಳಲ್ಲಿ ಮಳೆಗಾಲದ ನೆಪವೊಡ್ಡಿ ಶಾಲೆಗೆ ಹೋಗಲು ಹಿಂಜರಿದವನಲ್ಲ. ಮಳೆಗಾಲಕ್ಕಾಗಿಯೇ ಕೆಲವು ತಯಾರಿಗಳನ್ನು ಮಾಡುತಿದ್ದೆವು. ಪಾಠಪುಸ್ತಕ, ನೋಟ್ ಪುಸ್ತಕಗಳನೆಲ್ಲ ಒಂದು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ಮತ್ತೆ ಶಾಲಾ ಬ್ಯಾಗಿಗೆ ತುರುಕುತ್ತಿದೆವು.ಗಾಳಿಗೆ ಕೊಡೆ ಓಡಿಹೋಗುವ ಸಂಭವವಿರುತ್ತಿದ್ದುದರಿಂದ highschool  ಗೆ ಹೋಗುವ ತನಕ ರೈನ್ ಕೋಟುಗಳನ್ನೇ ಧರಿಸುತ್ತಿದ್ದೆವು. ನಾನು ಇನ್ನು ಇಂದಿನ ಯುವ ಜನಾಂಗಕ್ಕೆ ಸೇರಿದವನದರೂ, ನಾವು ಶಾಲೆಗೆ ಹೋಗುವ ಸಮಯದಲ್ಲಿ ಇಂದಿನ ಮಕ್ಕಳಂತೆ ಶಾಲಾ ವ್ಯಾನು, ಅಟೋ ಏನು ಇರಲಿಲ್ಲ.ನಡೆದುಕೊಂಡೇ ಶಾಲೆಗೆ ಹೋಗಬೇಕಾಗಿತ್ತು. ಮಳೆಯಲ್ಲಿಯೇ ಶಾಲೆಗೆ ತೆರಳಿ ಪಾಠ ಪ್ರವಚನಗಳನ್ನು ಕೇಳಿ ಸಂಜೆಯೂ ಸಹ ಮಳೆ ಸುರಿಯುತ್ತಿದರೆ ಅದೇ ಮಳೆಯಲ್ಲಿ ಮನೆಗೆ ಹಿಂದಿರುಗುತ್ತಿದೆವು. ಇದಕ್ಕೆ ನಾನೆಂದೂ ಗೊಣಗುತ್ತಿರಲಿಲ್ಲ. ಅದೇ ಮಳೆಯಲ್ಲಿ ಏನೋ ಖುಷಿ ಕಾಣುತ್ತಿದ್ದೆ. ಮಳೆಯಲ್ಲಿ ನೆನೆದು ಬಂದಂತಹ ಮಕ್ಕಳನ್ನು 
ಶೀತ, ಜ್ವರ ಅವರಿಸಿಕೊಳ್ಳದಿರಲಿ ಎಂದು ಸಂಜೆಗೇನೆ ತಾಯಿಯವರು ಸುಡು ಸುಡು ಬಿಸಿ ಸ್ನಾನದ ನೀರನ್ನು ತಯಾರು ಮಾಡಿ ಇಡುತಿದ್ದರು. ಹೀಗೆ ನನ್ನ ಹೆತ್ತವರು, ಮಕ್ಕಳು ಶಾಲೆಗೆ ಗೈರು ಹಾಜರಗಬಾರದು ಹಾಗೇನೆ ಅನರೋಗ್ಯದಿಂದಲೂ ನರಳ ಬಾರದೆಂದು ಅತೀವ ಕಾಳಜಿ ವಹಿಸುತ್ತಿದ್ದರು.

ಕಾಲೇಜು ತಲುಪುವಾಗಲಂತೂ ಮಳೆಗಾಲದಲ್ಲಿ ಹಲವರು ಮಾರ್ಪಾಡುಗಳು ಆಗಿದ್ದವು. ರೈನ್ ಕೋಟುಗಳ ಜಾಗಕ್ಕೆ ಜಾಕೆಟ್ ಗಳು ಬಂದಿದ್ದವು. ನಗರ ಪ್ರದೇಶದಲ್ಲಿ ಕೊಡೆ ಹಿಡಿದು ಸಂಚರಿಸುವುದು ಸ್ವಲ್ಪ ತ್ರಾಸದಾಯಕವಾಗಿರುವುದರಿಂದ, ಕೊಡೆಯ ಬಳಕೆಯನ್ನು ಕಮ್ಮಿ ಗೊಳಿಸಿ ತುಂತುರು ಮಳೆಯಲ್ಲಿ ನೆನೆದುದೆ ಬಹಳ. ಮಳೆ ತೀರ ಅತಿಯಾದ ಸಂದರ್ಭದಲ್ಲಿ 'ರೈನಿ ಹಾಲಿಡೆ' ಸಿಕ್ಕಿದ್ದೂ ಇದೆ. 

ಉದ್ಯೋಗ ಸಿಕ್ಕಿದ ಬಳಿಕ, ಈಗ ಅನುಭವಿಸುತ್ತಿರುವ ಮಳೆಗಾಲದ ಖುಷಿಯೇ ಬೇರೆ. ಹೇಳಿ ಕೇಳಿ ಬಿಸಿಲ ನಾಡಾದ ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವವನು ನಾನು. ಕೆಂಡದಂತಹ ತಾಪಮಾನದಿಂದ ರಾತ್ರಿ-ಹಗಲು ನರಳಿದ ಬಳಿಕ ಮಳೆರಾಯನನ್ನು ಕಂಡಾಗ ಆಗುವ ಆನಂದ ಅವರ್ಣನೀಯ.

ಹೀಗೆ ಮಳೆಗಾಲ ಪ್ರತಿಯೊಬ್ಬರ ಜೀವನದಲ್ಲಿ ತನ್ನದೇ ಅದ ಸ್ಥಾನವನ್ನು ಗಳಿಸಿಕೊಂಡಿದೆ.ಈ ಮಳೆ ಚಲನಚಿತ್ರ ತಯಾರಕರಿಗೂ ಬಹಳ ಅಚ್ಚುಮೆಚ್ಚು. ಮಳೆ ಸುರಿಸುತ್ತಾ, ಮಳೆ ಹೆಸರಿನಲ್ಲಿ ಬಂದ ಅನೇಕ ಸಿನಿಮಾಗಳು, ಮಳೆಯಲ್ಲಿ ಶೂಟಿಂಗು ಮಾಡಲ್ಪಟ್ಟ ಅನೇಕ ಸಾಂಗುಗಳು ಸೂಪರ್ ಹಿಟ್ ಆಗಿವೆ. ಕೆಲವರ ಮನಸ್ಸಿನಲ್ಲಿ ಈ ಮಳೆ ಕಪ್ಪು ಚುಕ್ಕೆಯಗಿರುವುದು ಸುಳ್ಳಲ್ಲ. ಮಳೆಯ ಕೆಟ್ಟ ಅವಾಂತರದಿಂದ ನರಳಿದವರು ಅನೇಕ. ಮಳೆಯಂತಹ ಪ್ರಾಕೃತಿಕ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೂ ಸರಕಾರ-ಜನತೆ ಇಚ್ಚಿಸಿದರೆ ಇದರ ಅಡ್ಡ ಪರಿಣಾಮವನ್ನು ಕುಗ್ಗಿಸಬಹುದು.

ನೀವು ಏನೇ ಹೇಳಿ, ಮಳೆಗೆ ಮಳೆಯೇ ಸಾಟಿ. ಸ್ವಲ್ಪ ಭ್ರಮಾಲೋಕಕ್ಕೆ ಹೋಗಿ.... ಮಳೆಗಾಲದ ಒಂದು ಸುಂದರ ಮುಸ್ಸಂಜೆ...ಮಾಡಲು ಏನೂ ಪ್ರಮುಖ ಕೆಲಸವಿಲ್ಲ....ಚಾವಡಿಯಲ್ಲೊಂದು ಆರಾಮ ಕುರ್ಚಿ...ಬಲಗೈಯಲ್ಲಿ ನಿಮ್ಮ ಅಚ್ಚುಮೆಚ್ಚಿನ ಬರಹಗಾರನ ಕಾದಂಬರಿ....ಎಡಗೈಯಲ್ಲಿ ಕಾಫಿ ಕಪ್.... ಹೊರಗಡೆ ಧೋ ಧೋ ಎಂದು ಸುರಿಯುವ ಮಳೆ...... ಇದೇ ಮಳೆಯೊಂದಿಗೆ ಕಾಫಿ, ಕಾದಂಬರಿ ಆಸ್ವಾದಿಸುವ ಸುಖ ಯಾರಿಗುಂಟು ಯಾರಿಗಿಲ್ಲ. ಮುಂಗಾರಿನ ಮುತ್ತಿನ ಮತ್ತಿನಿಂದ ನಿಷೆಗೊಳಗಾದ ಕವಿಯು ಅದಕ್ಕೆ ಹೇಳಿರಬೇಕು......ಮುಂಗಾರು ಮಳೆಯೇ........ಏನು ನಿನ್ನ ಹನಿಗಳ ಲೀಲೆ......