Friday, 5 August 2011

ಉಳ್ಳವರು ಶಿವಾಲಯವ ಮಾಡುವರು...................

ಒಂದು ಕಾಡಿನಲ್ಲಿ ಆನೆ ಮತ್ತು ಇಲಿಗಳಿಬ್ಬರು ಗೆಳೆಯರಾಗಿದ್ದರು.ಅವರು ಹೇಗೆ ಗೆಳೆಯರಾದರು ಎಂಬುವುದು ಇಲ್ಲಿ ಮುಖ್ಯವಲ್ಲ.ಇಬ್ಬರೂ ಅನ್ಯೋನ್ಯವಾಗಿದ್ದರು.ಅದರೂ ಇಲಿಗೆ ಆನೆಯ ದೈತ್ಯ ದೇಹದ ಮೇಲೇ ಕಣ್ಣು. ಆನೆ ಲದ್ದಿ ಹಾಕುತ್ತದೆ, ತನಗೆ ಯಾಕೆ ಇದು ಸಾಧ್ಯವಿಲ್ಲವೆಂದು ಇಲಿ ಪ್ರತಿದಿನ ಚಿಂತಿಸುತಿತ್ತು. ತಾಲೂ ಲದ್ದಿ ಹಾಕಬೇಕೆಂದು ಹಲವಾರು ಪ್ರಯತ್ನಗಳನ್ನೂ ಮಾಡಿತು.ಕೊನೆಗೂ ಅದು ಸಫಲವಾಗಲೇ ಇಲ್ಲ.ಇದರಿಂದ ಜಿಗುಪ್ಸೆಗೊಂಡು ಇಲಿ 'suicide' ಮಾಡಿಕೊಂಡಿತಂತೆ.

ಇಂದು ನಾವು ಅನುಕರಣೆಯ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಒಬ್ಬರಂತೆ ಇನ್ನೊಬ್ಬರಾಗಳು ಪ್ರಯತ್ನಿಸುತ್ತಿದ್ದೇವೆ. ಈ ಪ್ರಯತ್ನದಲ್ಲಿ ಸತ್ಯತೆಯನ್ನು ತಿಳಿಯಲು ಸಾಧ್ಯವಾಗದೆ ದೊಡ್ಡ ಪ್ರಪಾತದಲ್ಲಿ ಬೀಳುತಿದ್ದೇವೆ. ನಾವೆಂದೂ ನಮ್ಮ ಸ್ಥಿತಿ-ಗತಿ, ಆರ್ಥಿಕ ಮಟ್ಟ, ಸಾಮರ್ಥ್ಯ, ಸಂಪ್ರದಾಯಗಳ ಬಗ್ಗೆ ಚಿಂತಿಸುವುದೇ ಇಲ್ಲ. ಯಾವುದೋ ಒಂದನ್ನು ಅನುಕರಿಸುತ್ತಾ ಅದನ್ನು ಪಡೆಯಲಾಗದೆ, ತಮ್ಮ ತನವನ್ನೂ ಕಳೆದುಕೊಂಡು 'ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ' ಎಂಬ ಸ್ಥಿತಿಯನ್ನು ತಲುಪುತಿದ್ದೇವೆ.

ಕಾಲೇಜಿಗೆ ಹೋಗುವ ವಿಧ್ಯಾರ್ಥಿಯೊಬ್ಬ ತನ್ನ ಶ್ರೀಮಂತ ಗೆಳೆಯನ ಬಳಿಯಿರುವ ದ್ವಿಚಕ್ರವಾಹನವನ್ನು ನೋಡಿ ತನಗೂ ಕೊಡಿಸುವಂತೆ ಹೆತ್ತವರಲ್ಲಿ ದುಂಬಾಲು ಬೀಳುತ್ತಾನೆ. ಶಿಕ್ಷಣ ಕೊಡಿಸುವುದೇ ದುಸ್ಥಿರವಾಗಿರುವಾಗ ಆ ತಂದೆ-ತಾಯಿ ಮಗನ ಆಸೆಯನ್ನು ಹೇಗೆ ತಾನೇ ಪೂರೈಸಲು ಸಾಧ್ಯ? ಅದೇ ಕಾಲೇಜಿಗೆ ಹೋಗುವ ಇನ್ನೊಬ್ಬ ವಿದ್ಯಾರ್ಥಿಯು ಸದಾ 'ಗರ್ಲ್ ಫ್ರೆಂಡ್' ಗಳಿಂದ ಸುತ್ತುವರಿದಿರುವ ತನ್ನ ಗೆಳೆಯನೊಬ್ಬನನ್ನು ನೋಡಿ ಆಕರ್ಷಣೆಯೋ ಪ್ರೀತಿಯೋ ತಿಳಿಯದೆ ಯಾವುದೊ ಹುಡುಗಿಯ ಮೋಹ ಪಾಶದಲ್ಲಿ ಸಿಲುಕಿ ಕೊನೆಗೆ ಅವಳು ಕೈ ಕೊಟ್ಟಾಗ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಾದಾ ಕಚೇರಿಯಲ್ಲಿ ಕೆಲಸ ಮಾಡುವಂತಹ ಗುಮಾಸ್ತನೊಬ್ಬನು, ತನ್ನ ಸಂಬಂಧಿಯೊಬ್ಬ ಕಟ್ಟಿಸಿದ ಐಶರಾಮಿ ಬಂಗಲೆಯಿಂದ ಪ್ರೇರಿತನಾಗಿ ಅದೇ ರೀತಿಯ ಮನೆಯನ್ನು ಕಟ್ಟಿಸಲು ಮನ ಮಾಡುತ್ತಾನೆ. ಮೈತುಂಬಾ ಸಾಲ ಮಾಡಿ, ಮನೆ ಕಟ್ಟಿ ಬರ್ಜರಿಯಾಗೆ ಗೃಹ ಪ್ರವೇಶ ಮಾಡುತ್ತಾನೆ. ಬಳಿಕ ಸಾಲಗಾರರ ಬಾಧೆ ತಾಳಲಾರದೆ ಅದೇ ಮನೆಯಲ್ಲಿ ನೇಣಿಗೆ ಶರಣಾಗುತ್ತಾನೆ. ಹೀಗೆ ಅನುಕರಣೆಯನ್ನು ಅಪ್ಪಿಕೊಂಡು ಹಾಳಾದವರೇ ಬಹಳ.

ಬ್ರಿಟೀಷರು ಭಾರತಕ್ಕೆ ಬಂದು ಆಳ್ವಿಕೆ ಆರಂಭಿಸಿದಾಗ, ಇಡೀ ದೇಶವೇ ಅವರ ವಿರುದ್ಧ ಹೋರಾಡಿತು.ಅವರು ಎಷ್ಟೇ ಕಾಟ ಕೊಟ್ಟರೂ ನಮ್ಮಲ್ಲಿ ಕೆಲವರು ಅವರ ಸೂಟು-ಬೂಟು, ಶೀಮಂತಿಕೆ, ಭಾಷೆಯಿಂದ ಪ್ರೇರಿತರಾಗಿ ಅವರಿಗೇ ಜೈ ಎನ್ನುತ್ತಾ ಅತ್ಯುತ್ತಮ ಹುದ್ದೆಗೆ ಏರಿಬಿಟ್ಟರು. ಇಂದು ಕೂಡ ನಮ್ಮಲ್ಲೇ ಮೆಕಾಲೆಯ ಮಕ್ಕಳು ಅನೇಕರಿದ್ದಾರೆ. ಆ ಕಡೆ ಆ ಸಂಸ್ಕೃತಿಯನ್ನು ಪೂರ್ತಿಯಾಗಿ ಅಪ್ಪಿಕೊಳ್ಳಲಾಗದೆ, ಇತ್ತ ಅಪ್ಪಟ ಭಾರತೀಯರೂ ಆಗಿರದೆ, ದೇಶಿಯೂ ಅಲ್ಲ ವಿದೇಶಿಯೂ ಅಲ್ಲದಂತೆ ಬದುಕುತ್ತಿದ್ದಾರೆ.ಮನೆ ಮನೆಗಳಲ್ಲಿ ಉಪ್ಪಿಟ್ಟು ತಿಂದು, ಮೀಟಿಂಗು ನಡೆಸಿ ಶಕ್ತಿ ಶಾಲಿಯಾಗಿ ಅಧಿಕಾರಕ್ಕೇರಿದ ಶಿಸ್ತಿಗೆ ಹೆಸರಾಗಿದ್ದ ರಾಜಕೀಯ ಪಕ್ಷವೊಂದು, ಬಳಿಕ ಗಣಿ ಧಣಿಗಳ ಧನದಿಂದ ಉತ್ತೆಜನಗೊಂದು ರೆಸಾರ್ಟ್ ಸಂಸ್ಕೃತಿಗೆ ಶರಣಾಗಿ, ಅಶಿಸ್ತನ್ನು ಮೈಗೂಡಿಸಿಕೊಂಡು ಎರಡು ಬಣಗಳಾಗಿ ಈಗ ಜನತೆಯ ಮೂದಲಿಕೆಗೆ ಒಳಗಾಗಿರುವ ಉದಾಹರಣೆಯೂ ನಮ್ಮ ಮುಂದಿದೆ.

ಪರಮ ಶಕ್ತನಾದ ಪರಮಾತ್ಮನೇ ಇರಲಿ, ಇಲ್ಲ ವಿಜ್ಞಾನ ಹೇಳುವಂತೆ ಜೀವವಾಹಿನಿ (ಜೀನ್ಸ್) ಗಳೇ ಆಗಿರಲಿ, ಪ್ರತಿಯೊಬ್ಬ ಮನುಷ್ಯನಿಗೆ ಪ್ರತ್ಯೇಕವಾದ ರೂಪ-ಗುಣ-ಶಕ್ತಿ ನೀಡಲಾಗಿದೆ.ಇಲ್ಲಿ ಪ್ರತಿಯೋರ್ವನೂ ತನ್ನದೇ ರೀತಿಯಲ್ಲಿ ಸಶಕ್ತನಾಗಿದ್ದಾನೆ. ಅವನದೇ ರೀತಿಯಲ್ಲಿ ಸಫಲತೆಯನ್ನು ಪಡೆಯುವ ಅವಕಾಶ, ಸಾಮರ್ಥ್ಯ ಹಾಗು ಹಕ್ಕನ್ನು ಪಡೆದಿದ್ದಾನೆ. ಹೀಗಿದ್ದರೂ ಏನೂ ಗೊತ್ತೇ ಇಲ್ಲದಂತೆ ಇನ್ನೊಬ್ಬರಿಂದಲೇ ಋಣಾತ್ಮಕವಾಗಿ ಪ್ರಭಾವಿತನಾಗುತಿದ್ದಾನೆ. ಧನಿಕ ವರ್ಗಗಳಿಂದ ನಡೆಸಲ್ಪಡುತಿದ್ದ ಹೋಮ-ಹವನ, ಪೂಜಾ-ಪುನಸ್ಕಾರ, ದೇವಾಲಯಗಳಿಂದ ವಿಚಲಿತರಾಗದೆ ಜಗಜ್ಯೋತಿ ಬಸವೇಶ್ವರರು 'ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯ' ಎಂದು ಅಂದೇ ಹೇಳಿದ್ದಾರೆ.ತಾನು ಬಡವ ದೈವ ಪೂಜೆ ಹೇಗೆ ಮಾಡಲಿ ಎಂದು ಯೋಚಿಸುವುದರ ಬದಲು ತಮ್ಮ ದೇಹವೆಂಬ ದೇಗುಲದ, ಹೃದಯವೆಂಬ ಗರ್ಭಗೃಹದಲ್ಲಿ ಆ ಪರಮಾತ್ಮನನ್ನು ಪ್ರತಿಷ್ಠಾಪಿಸಲು ಸೂಚಿಸಿದ್ದಾರೆ.

ಇಷ್ಟೆಲ್ಲಾ ಅಂದ ಮೇಲೇ ಅನುಕರಣೆ ತಪ್ಪೇ? ಇನ್ನೊಬ್ಬರಿಂದ ಪ್ರೇರಿತರಾಗಿ ಉತ್ತಮ ಸ್ಥಾನವನ್ನು ಸಂಪಾದಿಸುವುದು ಕೆಟ್ಟ ವಿಚಾರವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಖಂಡಿತವಾಗಿಯೂ ಇದು ತಪ್ಪಲ್ಲ. ನಿಜ ಹೇಳಬೇಕೆಂದರೆ, ಉತ್ತಮ ರೀತಿಯಲ್ಲಿ ಅನುಕರಣೆ ಮಾಡುವುದನ್ನು ನಮಗೆ ಕಲಿಸಿಯೂ ಇಲ್ಲ ನಾವು ಕಲಿತೂ ಇಲ್ಲ. ನಾವು ಋಣಾತ್ಮಕವಾಗಿ ಪ್ರೇರಣೆಗೆ ಒಳಗಾಗುತ್ತೆವೆಯೇ ಹೊರತು, ಧನಾತ್ಮಕವಾಗಿಯಲ್ಲ. ನಾವು ಇನ್ನೊಬ್ಬರಲ್ಲಿರುವ ಭೋಗ್ಯ ವಸ್ತುಗಳನ್ನು ನೋಡುತ್ತೇವೆ ಬದಲಾಗಿ, ಅವುಗಳನ್ನು ಗಳಿಸಲು ಆ ವ್ಯಕ್ತಿಯು ಉಪಯೋಗಿಸಿದ ಮಾರ್ಗವನ್ನಲ್ಲ. ನಾವು ವ್ಯಕ್ತಿಯಲ್ಲಿರುವ ಐಶ್ವರ್ಯದಿಂದ ಮತ್ತಿಗೊಳಗಾಗುತ್ತೆವೆಯೇ ಹೊರತು ಅವನ ಗುಣದಿಂದಲ್ಲ.

ಒಬ್ಬ ಕಷ್ಟಪಟ್ಟು ಓದಿ, ಉತ್ತಮ ರೀತಿಯಿಂದ ಗಳಿಸಿ ಆಸ್ತಿಯನ್ನು ಸಂಪಾದಿಸಿರಬಹುದು. ಆದರೆ ಅವನಲ್ಲಿರುವ ಆಸ್ತಿಯನ್ನು ನಾವು ಕ್ಷಣ ಮಾತ್ರದಲ್ಲೇ ಗಳಿಸಲು ಇಚ್ಚಿಸುತ್ತೆವೆಯೇ ಹೊರತು, ಅವನಂತೆ ಕಷ್ಟಪಡಲು ತಯಾರಿಲ್ಲ. ಇದಕ್ಕಾಗಿ ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ನಮ್ಮ ತಲೆ ಮೇಲೇ ನಾವೇ ಚಪ್ಪಡಿ ಎಳೆದುಕೊಳುತಿದ್ದೇವೆ.ವಿದ್ಯಾರ್ಥಿಯು ದ್ವಿಚಕ್ರವಿರುವ ಗೆಳೆಯನಿಂದ ಪ್ರೆರೆಪಿತವಾಗದೆ, ಉತ್ತಮ ಅಂಕವನ್ನು ಪಡೆಯುವ ಸಹಪಾಠಿಯಿಂದ ಪ್ರೇರೇಪಿಸಲ್ಪಟ್ಟರೆ ಇವನೂ ಕೂಡ ಉತ್ತಮ ಅಂಕವನ್ನು ಪಡೆಯಲು ಸಾಧ್ಯ. ಕುಕೃತ್ಯಗಳಿಂದ ಆಸ್ತಿ ಗಳಿಸಿ ಬಳಿಕ ಜೈಲು ಪಾಲದ ಹಲವಾರು ವ್ಯಕ್ತಿಗಳ ಉದಾಹರಣೆ ನಮ್ಮ ಮುಂದಿದ್ದರೂ ಸಹ ಬರೀ ಅವರ ಆಸ್ತಿಗೆ ನಾವು ಮರುಳಾಗುತ್ತೆವೆಯೇ ಹೊರತು ಘಟನೆಯಿಂದ ಪಾಠ ಕಲಿಯಿತ್ತಿಲ್ಲ.

ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪರಿಹಾರವೆನ್ನುವುದು ಇದ್ದೆ ಇದೆ. ಬಸವಣ್ಣನವರ ವಚನವನ್ನು ಇನ್ನೊಮ್ಮೆ ಪರಿಶೀಲಿಸಿ ನೋಡೋಣ. ಪ್ರಶ್ನೆ ಉದ್ಭವವಾಗುವುದು ಶಿವಾಲಯವನ್ನು ಕಟ್ಟುವುದರಲ್ಲಿ. ಶ್ರೀಮಂತರಲ್ಲಿ ಹಣವಿದೆ. ಅವರು ಎಷ್ಟು ಆಲಯವನ್ನಾದರೂ ಕಟ್ಟಬಹುದು. ಆದರೆ ಬಡವನಾದವನು ಏನು  ಮಾಡಲು ಸಾಧ್ಯ.ಆದರೆ ಬುದ್ಧಿ ಸ್ವಲ್ಪ ಓಡಿಸಿದರೆ ಅವನೂ ದೇಹವೆಂಬ ಶಿವಾಲಯವನ್ನು ಕಟ್ಟಬಹುದು. ಹೀಗೆ ಮಾಡಿದರೆ ದೇವಾಲಯವನ್ನು ಕಟ್ಟಿಸಿದ ಹಾಗೂ ಆಯಿತು ಹಣ ಕಾಸಿಗೂ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಹೀಗೆ ನಮ್ಮ ಬುದ್ಧಿವಂತಿಕೆಯಿಂದ ನಮ್ಮ ಸಾಮರ್ಥ್ಯದಿಂದಲೇ ಸಮಸ್ಯೆ ಪರಿಹರಿಸಲು ಸಾಧ್ಯ. ಆನೆ ಲದ್ದಿ ಹಾಕುವುದೆಂದು ಇಲಿ ಲದ್ದಿ ಹಾಕಲು ಸಾಧ್ಯವಿಲ್ಲ. ಅದು ಬರೀ 'ಬಿಟ್ಟೆ' ಇಡಬಹುದಷ್ಟೇ. ಯಾಕೆಂದರೆ "ನೋಡಿ ಸ್ವಾಮಿ ನಾವಿರೋದೆ ಹೀಗೆ". 


No comments:

Post a Comment