Wednesday, 5 October 2011

ಅನ್ಯಥಾ ಶರಣಂ ನಾಸ್ತಿ............................

ಪುರಾಣದಲ್ಲಿ ಗಜೇಂದ್ರ ಮೋಕ್ಷವೆಂಬ ಸನ್ನಿವೇಶ ಬರುತ್ತದೆ.ಪಾಪಾತ್ಮಗಳಿಗೆ ಮರಣದ ಬಳಿಕ ಭಗವಂತನು ಮೋಕ್ಷ ಕರುಣಿಸಿದ  ಅನೇಕ ಕಥೆಗಳನ್ನು ಕೇಳಿದ್ದುದ್ದರಿಂದ ಆ ಆನೆಗೂ ಇದೇ ರೀತಿ ಮೋಕ್ಷ ಸಿಕ್ಕಿರಬೇಕೆಂದು ಚಿಕ್ಕಂದಿನಲ್ಲಿ ತಿಳಿದುಕೊಂಡಿದ್ದೆ. ಆದರೆ ಈ ಘಟನೆಯಲ್ಲಿ ಮೋಕ್ಷದ ಅರ್ಥವೆಂದರೆ ಬದುಕಿರುವಾಗಲೇ ಬಂತಂತಹ ಕಷ್ಟದಿಂದ ಬಿಡುಗಡೆ.ಸ್ನಾನಕ್ಕಾಗಿ ಸರೋವರಕ್ಕೆ ತೆರಳಿದ ಗಜೇಂದ್ರನೆಂಬ ಆನೆಯ ಕಾಲನ್ನು ಮೊಸಳೆಯೊಂದು ಕಬಳಿಸಲು ಪ್ರಯತ್ನಿಸುತ್ತದೆ. ತಾನೇ ಬಲ ಶಾಲಿಯೆಂದು   ತಿಳಿದ ಆನೆಯು ಮೊಸಳೆಯಿಂದ ಬಿಡಿಸಿಕೊಳ್ಳಲು ಎಲ್ಲಾ ಕಸರತ್ತನ್ನು ಮಾಡುತ್ತದೆ. ಆದರೆ ನೀರಲ್ಲಿ ಮೊಸಳೆಯೆದುರು ಅದು ಸೋಲನ್ನನುಭವಿಸುತ್ತದೆ.ಇನ್ನೇನು ತನ್ನ ಪ್ರಾಣಪಕ್ಷಿ ಹಾರಿ ಹೋಗುತ್ತದೆ ಎಂದು ತಿಳಿದಾಗ ತನ್ನೆಲ್ಲ ಪ್ರಯತ್ನವನ್ನು ಬಿಟ್ಟು ಅದು ಭಗವಂತನಿಗೆ ಮೊರೆ ಹೋಗುತ್ತದೆ. ಗರುಡ ವಾಹನನಾದ ವಿಷ್ಣುವು ಕ್ಷಣಮಾತ್ರದಲ್ಲಿ ಅಲ್ಲಿ ಧಾವಿಸಿ ಮೊಸಳೆಯಿಂದ ಆನೆಯನ್ನು ಪಾರುಮಾಡುತ್ತಾನೆ. ಭಗವಂತನು ಬರುವುದೇನೋ ಬಂದು ಬಿಟ್ಟ, ಸ್ವಲ್ಪ ಬೇಗ ಬರಬಾರದಿತ್ತೆ? ಆನೆ ನೋವು ತಿನ್ನುವುದಾದರೂ ತಪ್ಪುತ್ತಿತ್ತು.ಆನೆಯೂ ಸಹ ಮೊದಲು ದೇವರ ಮೊರೆ ಹೋಗಲೇ ಇಲ್ಲ. ಎಂದು ಪರಮಾತ್ಮನೇ ಎಲ್ಲ ಎಂದು ಪ್ರಾರ್ಥಿಸಿತೋ ತಕ್ಷಣ ಅದು ಪರಿಹಾರವನ್ನು ಪಡೆಯಿತು.

ಮಹಾಭಾರತದಲ್ಲಿ ದ್ರೌಪತಿ ವಸ್ತ್ರಾಪಹರಣದ ಕೆಟ್ಟ ಗಳಿಗೆ. ಪತಿವರೈವರಿದ್ದರೇನು? ಸತಿಯನ್ನು ಕಾಪಾಡಲು ಯಾರಿಂದಲೂ ಸಾಧ್ಯವಾಗದೆ ಹೋಯಿತು.ದುಷ್ಟ ದುಶ್ಯಾಸನನು ಪಾಂಚಾಲಿಯ ಸೆರಗನ್ನು ಸೆಳೆಯುತ್ತಿರಬೇಕಾದರೆ ಧುರ್ಯೋದನನು ಅಟ್ಟಹಾಸಗೈಯುತಿದ್ದನು. ಕೌರವ ಸಹೋದರರಿಂದ ತನಗೆ ಬಿಡುಗಡೆಯಿಲ್ಲವೆಂದು ತಿಳಿದಿದ್ದರೂ ಅವಳು ಅವರಿಂದ ಬಿಡಿಸಿಕೊಳ್ಳುವ, ತನ್ನ ಶೀಲವನ್ನು ಉಳಿಸಿಕೊಳ್ಳುವ ವಿಫಲ ಯತ್ನವನ್ನು ಮಾಡುತಿದ್ದಳು.ಇನ್ನು ತನ್ನಿಂದ ಏನೂ ಸಾಧ್ಯವಿಲ್ಲವೆಂದಾಗ ಅಣ್ಣನಾದ ಕೃಷ್ಣನಿಗೆ ತುಂಬು ಹೃದಯದಿಂದ ಮೊರೆಹೊಗುತ್ತಾಳೆ. ವಾಸುದೇವನಂತೂ ತಾನು ಇದ್ದಲಿಂದಲೇ ಅನುಗ್ರಹಿಸಿ ಅಕ್ಷಯ ಅಮ್ಬರವನ್ನು ನೀಡುತ್ತಾನೆ.. ಆ ಅಕ್ಷಯಾಮ್ಬರವನ್ನು ಸೆಳೆಯಲು ವಿಫಲನಾದ ದುಶ್ಯಾಸನನು ತಾನೇ ಸುಸ್ತಾಗಿ ಹೋಗುತ್ತಾನೆ. ಪರ ಪುರುಷನಿಂದ ಸ್ಪರ್ಷಿಸಲ್ಪಟ್ಟ ಸಮಯದಲ್ಲೇ ಅಣ್ಣನೂ ಹಾಗೆಯೇ ಪರಮ ಚೇತನನೂ ಆದ ಶ್ರೀ ಕೃಷ್ಣನು  ದ್ರೌಪತಿಯ ಸಹಾಯಕ್ಕೆ ಬರಬಹುದಿತ್ತು. ಆದರೆ ಸ್ವಪ್ರಯತ್ನಕ್ಕೆ ಮೊರೆ ಹೋದ ದ್ರೌಪತಿಗೆ  ಆ ಅವಕಾಶವನ್ನು ನೀಡುವ ಸಲುವಾಗಿ ಅವನು ಬರಲೇ ಇಲ್ಲ. ಆದರೆ ಯಾವಾಗ ತುಂಬು ಮನಸ್ಸಿನಿಂದ 'ಅಣ್ಣಾ..' ಎಂದು ಕರೆದಳೋ ಅವನಿಗೆ ಅನುಗ್ರಹಿಸದೆ ಇರಲು ಸಾಧ್ಯವಾಗಲೇ ಇಲ್ಲ.

ಭಗವಂತನೆಂಬ ಶಕ್ತಿ ಹಾಗೇನೆ. ತನ್ನಿಂದ ಏನೂ ಇಲ್ಲ, ಎಲ್ಲಾ ನಿನ್ನಿಂದಲೇ ಎಂದು ಕರೆದಾಗ ಕ್ಷಣ ಮಾತ್ರದಲ್ಲಿ ನೆರವು ಸಿಗುತ್ತದೆ.ಇದು ಪರಮ ಶಕ್ತಿಯೆದುರು ನಾವು ಶೂನ್ಯವಾಗುವ ವಿಷಯವೂ ಹೌದು. ನಾವಂತೂ ಬರೀ ಅರಿಶಧ್ವರ್ಗಗಳಿಂದ   ಬಂಧಿಸಲ್ಪಟ್ಟು ಎಲ್ಲವನ್ನೂ ತುಚ್ಚವಾಗಿ ಕಂಡುಕೊಂಡು, ನಮ್ಮ ಮೇಲೇನೆ ಅತಿಯಾಗೆ ನಂಬಿಕೆ ಇಟ್ಟುಕೊಂಡು  ಅಹಂನಿಂದ ಬಾಳುತಿರುತ್ತೇವೆ. ಈ ಸ್ಥಿತಿಯಲ್ಲಿ ಯಾರೂ ನಮಗೆ ಸಹಾಯ ಮಾಡಲು ಸಾಧ್ಯವಿಲ್ಲ, ಮಾಡಲು ಇಚ್ಚಿಸುವುದೂ ಇಲ್ಲ.ಕಷ್ಟವನ್ನು  ತಾನೇ ಪರಿಹರಿಸಲು ಸಾಧ್ಯ, ತನಗೆ ಬಂಧು-ಬಾಂಧವರಿದ್ದಾರೆ.ಅವರು ತನ್ನ ಕಷ್ಟಕ್ಕೆ ಬರುತ್ತಾರೆ ಎಂದು ತಿಳಿದು ನಾವು ದೇವರ ಮೊರೆ ಹೋಗದೆ ಇರಬಹುದು. ನಮ್ಮ ಶಕ್ತಿ ಸಾಮರ್ಥ್ಯ, ಬಂಧು-ಬಳಗದವರು ನಮಗೆ ಸಹಾಯ ಮಾಡಬಹುದು ಯಾ ಮಾಡದೆ ಇರಬಹುದು. ಆದರೆ ನಮ್ಮ ಈ ನಂಬಿಕೆಗೂ ಒಂದು ಅವಕಾಶ ಕೊಡುವ ಸಲುವಾಗಿ ಭಗವಂತನು ರಂಗ ಪ್ರವೇಶ ಮಾಡುವುದೇ ಇಲ್ಲ. ಆದರೆ 'ಶೂನ್ಯ' ಸ್ಥಿತಿಗೆ ತಲುಪಿದ ನಮ್ಮ ಪ್ರಾರ್ಥನೆಯಿಂದ ನಮ್ಮ ಇಚ್ಛೆ ನೆರವೆರುವುದರಲ್ಲಿ ಸಂಶಯವೇ ಇಲ್ಲ. ಒಂದು ಶ್ಲೋಕ ಹೀಗಿದೆ, ಅನ್ಯಥಾ ಶರಣಂ ನಾಸ್ತಿ...ತ್ವಮೇವ ಶರಣಂ ಮಾಮ..ತಸ್ಮಾದ್ ಕಾರುಣ್ಯ ಭಾವೇನೆ ರಕ್ಷ ರಕ್ಷ ಸುರೇಶ್ವರ...( ಭಗವಂತಾ, ನನಗೆ ನಿನ್ನ ಹೊರತು ಬೇರೆ ಯಾರೂ ಗತಿಯಿಲ್ಲ. ಆದುದರಿಂದ ನೀನೆ ನನ್ನನ್ನು ರಕ್ಷಿಸ ಬೇಕು). ಈ ರೀತಿಯ ಆಳವಾದ ಕರೆಯಿಂದ ಕಲಿಯುಗದಲ್ಲೂ ಹಲವಾರು ವಿಚಿತ್ರತೆಗಳು ನಡೆದಿವೆ.ಇಹಲೋಕ ತ್ಯಜಿಸಿದ ಎಂದು ವೈದ್ಯರಿಂದ ಖಚಿತ ಗೊಂಡ ವ್ಯಕ್ತಿಯು ಬದುಕಿದ್ದಾನೆ. ಬೀದಿ ಪಾಲಾದ ವ್ಯಕ್ತಿಯು ದೇವರ ಅನುಗ್ರಹದಿಂದ ಮತ್ತೆ ಉನ್ನತ ಸ್ಥಾನಕ್ಕೆರಿದ್ದಾನೆ.  

ಭಗವಂತನೆಂಬ ಶಕ್ತಿಯನ್ನು ಬಿಟ್ಟು ಕೂಡ ಮೇಲೆ ಹೇಳಿದ ತತ್ವವನ್ನು ವಿವರಿಸಬಹುದು. 'ನೀನೆ ಎಲ್ಲಾ.. ನಿನದೆ ಎಲ್ಲಾ..'ಎನ್ನುವುದು ಇಹಲೋಕದ ಸುಖ-ಸಂತೋಷಕ್ಕೂ ಕೊಂಡಿಯಾಗಿದೆ.ಸ್ವಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳುವ ವ್ಯಕ್ತಿಗೆ ಉತ್ತಮ ಗೆಳೆಯರು ಸಿಗುವುದು ಕಷ್ಟ. ತೌರನ್ನು ಬಿಟ್ಟು ಬಂದಂತಹ ಹೆಣ್ಣೊಬ್ಬಳು ಗಂಡನ ಮನೆಯಲ್ಲಿ ತನ್ನ ಅಣ್ಣಂದಿರ ಶ್ರೀಮಂತಿಕೆ, ಅತ್ತಿಗೆಯಂದಿರ ಆಡಂಬರದ ಬಗ್ಗೆನೇ ಮಾತನ್ನು ಆಡುತ್ತಾ  ತನ್ನ ಮನೆಯವರನ್ನು ಹೊಗಳುತ್ತಿದ್ದರೆ ಗಂಡ ಹೆಂಡಿರ ಸಂಬಂಧ ಕೆಡಲು ಹೆಚ್ಚು ದಿನ ಬೇಕಾಗಿಲ್ಲ.ಇದನ್ನು ಬಿಟ್ಟು ಪತಿಯೇ ಎಲ್ಲ ಎಂದು ಅವನ ಸೇವೆ ಮಾಡುತ್ತಾ ಅವನ ಕಷ್ಟ ಸುಖಗಳಲ್ಲಿ ಭಾಗಿಯಾದರೆ, ಗಂಡನ ಮನೆಯಲ್ಲಿ ಅವಳು ಉತ್ತಮ ಸ್ಥಾನ ಗಿತ್ತಿಸಿಕೊಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಪತಿರಾಯನಿಗೂ ಅನ್ವಯವಾಗುತ್ತದೆ.  ಇನ್ನು ಇದರಲ್ಲಿ ಭಗವಂತನನ್ನು ಸೇರಿಸಿಕೊಂಡು ವಿವರಣೆಯನ್ನು ನೀಡಿದರೂ, ಆ ಪರಮ ಶಕ್ತನಾದ ಪರಮಾತ್ಮನ ಮುಂದೆ ಕುಬ್ಜವಾಗುವುದು ಅವರ್ಣನೀಯ ಅನುಭವ. ಅದೂದರಿಂದಲೇ ಅನೇಕಾನೇಕ ದಾಸ ಶ್ರೇಷ್ಟರು, ಸಾಧು-ಸಂತರು ಭಗವಂತನೇ ಸರ್ವಶ್ರೇಷ್ಠ ಎಂದು ಗುಣ ಗಾನ ಮಾಡಿ ಆನಂದವನ್ನು ಹೊಂದಿದ್ದಾರೆ.

ಕೆಲವರು ಸ್ವಸಾಮರ್ಥ್ಯದಿದಲೇ ಯಶಸ್ಸನ್ನು ಗಳಿಸುತ್ತಿದ್ದಾರೆ. ಅವರೆಂದೂ ಭಗವಂತನ ಮೊರೆ ಹೋಗುವುದೇ ಇಲ್ಲ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ ದೇವರೇ ಇಲ್ಲವೆನ್ದಿದ್ದಾರೆ. ಆತ್ಮ ಮತ್ತು ಪರಮಾತ್ಮರ ಮಧ್ಯೆ ಕಲಹ ಯಾವತ್ತಿಂದಲೋ ನಡೆದುಕೊಂಡು ಬಂದಿದೆ. ಇದಕಂತು ಸ್ಪಷ್ಟ ವಿವರಣೆ, ಅಂತ್ಯ ನೀಡಲೂ ಸಾಧ್ಯವಿಲ್ಲ. ಇನ್ನೇನು ಸಂಶಯ ನಿವಾರಣೆ ಯಾಯಿತು ಎನುವಾಗ ನಾವಿನ್ನೂ ಆರಂಭದಲ್ಲೇ ಇದ್ದೇವೆ ಅಥವಾ ಪ್ರಶ್ನೆಯ ಇನ್ನೊಂದು ಸುಳಿಯಲ್ಲಿ ಸಿಳುಕ್ಕಿದ್ದೇವೆ ಎಂದು ಭಾಸವಾಗದೆ ಇರಲಾರದು. ಸ್ವಸಾಮರ್ಥ್ಯದಿಂದಲೇ ಇರಲಿ ಅಥವಾ ಭಗವಂತನ ಕೃಪೆಯಿಂದಲೇ ಇರಲಿ ಆತ್ಮ ಶುದ್ಧಿಯಿಲ್ಲದವನೆಂದೂ ಗೆಲುವನ್ನುಪಡೆಯಲಾರ. ಪಡೆದರೂ ಸಹ ಅದು ಕ್ಷಣಿಕವಷ್ಟೇ. ದೇವರು  ಇಲ್ಲವೆನ್ನುವನಾಗಿರಲಿ  ಯಾ ದೇವರೇ ಎಲ್ಲ ಎನ್ನುವನೆ ಆಗಿರಲಿ ಜಯ ಪಡೆಯಬೇಕೆಂದರೆ ಅರಿಶದ್ವರ್ಗಗಳಿಂದ ಸ್ವಲ್ಪವಾದರೂ ಬಿಡುಗಡೆ ಪಡೆದವನಾಗಿರಲೇ ಬೇಕು.

ಇಷ್ಟೆಲ್ಲಾ ಅಂದ ಮೇಲೆ ಇನ್ನೊಂದು ವಿಚಾರವನ್ನು ಹೇಳಲೇ ಬೇಕು.ಕಾಯುವ ದೇವರೇ ನಮನ್ನು ಕೊಂಡರೆ? ರಾಮಾಯಣದ ಒಂದು ಚಿಕ್ಕ ತುಣುಕು.ತಿಳಿಯದೆ ಯಾವುದೊ ಕಾರಣದಿಂದಾಗಿ ಕಪ್ಪೆಯೊಂದಕ್ಕೆ ಶ್ರೀ ರಾಮನಿಂದ ತೊಂದರೆಯಾಗುತ್ತದೆ. ಬಳಿಕ ಈ ಘಟನೆಯಿಂದ ಮುಜುಗರಕ್ಕೆ ಒಳಗಾದ ರಾಮನು ಇದರ ಬಗ್ಗೆ ತನಗೆ ಯಾಕೆ ತಿಳಿಸಲಿಲ್ಲ ವೆಂದು ಕೇಳುತ್ತಾನೆ.ಅದಕ್ಕೆ ಆ ಕಪ್ಪೆಯು, 'ಶ್ರೀ ರಾಮ, ನೀನೆ ನಮ್ಮನ್ನು ರಕ್ಷಿಸಬೇಕಾದವನು. ನಿನ್ನಿಂದಲೇ ನಾವು ತೊಂದರೆಗೊಳಗಾದರೆ ನಮ್ಮನ್ನು ರಕ್ಷಿಸುವವನಾರು?' ಈ ಮಾತನ್ನು ಕೇಳಿದಂತಹ ರಾಮನು ತನ್ನಿಂದಾದ ತಪ್ಪಿಗಾಗಿ ಅತೀವ ವೆದನೆಗೊಳಗಾಗುತ್ತಾನೆ . ಮಾನವ ಜನ್ಮದಲ್ಲಿ ಹುಟ್ಟಿದ ರಾಮನು ಅಯೋಧ್ಯೆಯ ರಾಜನಗಿದ್ದುದರಿಂದ ಅವನು ಪ್ರಜೆಗಳಿಗೆ ಪ್ರತ್ಯಕ್ಷ ದೇವನಾಗಿದ್ದ. ಮುಂದೆ ಎಂದೂ ತನ್ನ ಆಡಳಿತದಲ್ಲಿ ಯಾರಿಗೂ ತೊಂದರೆ ಯಾಗದಂತೆ ನೋಡಿಕೊಳ್ಳುತ್ತಾನೆ. ಅವನ ಆಡಳಿತದಲ್ಲಿ ಪ್ರಜೆಗಳೆಲ್ಲರೂ ಅತ್ಯಂತ ಸುಖಿಗಳಾಗಿರುತ್ತಾರೆ. ಆದರೆ ಇಂದು ಆಗುತ್ತಿರುವುದೇನು? ರಕ್ಷಕರೇ ನಮ್ಮ ಭಕ್ಷ್ಕರಾಗಿದ್ದಾರೆ.ಪ್ರಜೆಗಳ ಏಳಿಗೆಗೆ ಮೀಸಲಿರಿಸಬೇಕಾಗಿದ್ದ  ರಾಷ್ಟ್ರದ ಸಂಪತ್ತುಗಳು ರಾಜಕಾರಣಿಗಳಿಂದ ಲೂಟಿಯಾಗುತ್ತಿದೆ.ಹತ್ತು ಹಲವಾರು ತಲೆಮಾರುಗಳು ಕೂತು ಉಂಡರೂ ಸಹ ಖಾಲಿಯಾಗದಿರುವಂತಹ ಆಸ್ತಿಯನ್ನು ಹೊಂದಿಸಿಕೊಳುತಿದ್ದಾರೆ. ಅತ್ಯಾಚಾರ ಅನಾಚಾರ ಎಲ್ಲೇ ಮೀರುತ್ತಿದೆ.ಇಂತಹ ಸಂದರ್ಭದಲ್ಲಿ ನಾವು ಪ್ರಾರ್ಥನೆಯನ್ನು ಮಾಡೋಣ......ಅನ್ಯಥಾ ಶರಣಂ ನಾಸ್ತಿ ............ಈ ಪ್ರಾರ್ಥನೆ ನಮ್ಮ ಲೋಕಾಯುಕ್ತರ ಪರವಾಗಿಯೇ ಇರಬಹುದು ಇಲ್ಲ ನೇರವಾಗಿ ಅ ಭಗವಂತನ ಸಲುವಾಗಿಯೇ ಇರಬಹುದು....ಯಾರಾದರೂ  ರಕ್ಷ.....ರಕ್ಷ..........