ಸಂಸ್ಕೃತದ 'ದ್ವೇ' ಎನ್ನುವ ಸಮೂಹಕ್ಕೆ ಸೇರುವ ಪದವೇ 'ದ್ವಂದ್ವ'. ಇದು ಎರಡು ಎನ್ನುವ ಅರ್ಥವನ್ನು ಕೊಡುತ್ತದೆಯಾದರೂ ಒಂದಕ್ಕಿಂತ ಹೆಚ್ಚಾದ ಅಭಿಪ್ರಾಯ, ಗೊಂದಲ, ತುಮುಲ, ಸಂಶಯ, ಸಂದೇಹ, ಗಲಿಬಿಲಿಗಳನ್ನು ಸೂಚಿಸಲು ಈ ಪದವನ್ನು ಉಪಯೋಗಿಸುತ್ತೇವೆ.ದ್ವಂದ್ವ ಎನ್ನುವ ಶಬ್ಧದಲ್ಲೇ ಏನೋ ಅಡಗಿದೆ. ದ್ವ ವನ್ನು ಎರಡು ಸಲ ಬರೆದು ಮಧ್ಯದಲ್ಲಿ ಸೊನ್ನೆ (ಶೂನ್ಯ-ಏನೂ ಇಲ್ಲ) ಸೇರಿಸಿದರೆ ಸಿಗುವ ಪದದ ಉಚ್ಚಾರಣೆಯಲ್ಲೇ ಏನೋ ಇದೆ. ದ್ವಂದ್ವವು ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಇರಬಹುದು ಅಥವಾ ವ್ಯಕ್ತಿಯೊಬ್ಬನ ಮನಸ್ಸಿನೊಳಗೆನೆ ದ್ವಂದ್ವವಿರಬಹುದು. ನಾನೂ ಕೂಡ ಬರೆಯಬೇಕೋ, ಬೇಡವೋ ಎನ್ನುವ ದ್ವಂದ್ವದೊಂದಿಗೆ ಈ ಬ್ಲಾಗನ್ನು ಮುಂದುವರಿಸುತಿದ್ದೇನೆ.
ಅಭಿಪ್ರಾಯ ಬೇಧಗಳ ಜೊತೆಗೇನೆ ವ್ಯಕ್ತಿಯೊಬ್ಬನ ಜನನವಾಯಿತೆಂದರೆ ತಪ್ಪಾಗಲಾರದು. ತಮಗೊಂದು ಮಗು ಬೇಕೋ, ಬೇಡವೋ ಎಂಬ ಸಂಶಯದೊಂದಿಗೆನೆ ವ್ಯಕ್ತಿಯೊಬ್ಬನ ಜೀವನದಲ್ಲಿ ದ್ವಂದ್ವವು ಪ್ರವೇಶ ಪಡೆಯುತ್ತದೆ. ವ್ಯಕ್ತಿಯೊಬ್ಬನಿಗೆ ಐಡೆಂಟಿಟಿ ಯನ್ನು ನೀಡುವ ಹೆಸರು ಕೂಡ ಗೊಂದಲದಿಂದಲೇ ಕೂಡಿರುತ್ತದೆ. ಮಗ ಅಥವಾ ಮಗಳಿಗೆ ನಕ್ಷತ್ರದ ಹೆಸರನ್ನಿಡುವುದೋ? ಮಾಡರ್ನ್ ಹೆಸರಿಡುವುದೋ? ಅಥವಾ ಅಜ್ಜ- ಅಜ್ಜಂದಿರ ಹೆಸರನ್ನು ಪುನ: ನಾಮಕರಣ ಮಾಡುವುದೋ? ಎಂಬ ಗಲಿಬಿಲಿಯೊಂದಿಗೆನೆ ಯಾವುದೊ ಹೆಸರಿಡಲಾಗುತ್ತದೆ. ಮುಂದೆ ಅದೇ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ವ್ಯಕ್ತಿಯು ಆ ಹೆಸರಿನಿಂದ ಗಲಿಬಿಲಿಗೊಳ್ಳುವ ಸಾಧ್ಯತೆಯೂ ಇದೆ. ತನ್ನ ಹೆಸರಿನಲ್ಲಿ ಅಪಹಾಸ್ಯ ಅಡಗಿದೆಯೋ? ಯಾವ ರೀತಿಯಲ್ಲಿ ಉಳಿದವರು ತನ್ನ ಹೆಸರನ್ನು ಸ್ವೀಕರಿಸುತ್ತಾರೆ? ಎನ್ನುವ ತುಮುಲದಿಂದ ತಮ್ಮ ಹೆಸರನ್ನು ಬದಲಾಯಿಸಿದವರೂ ಇದ್ದಾರೆ.
ಇಂದಿನ ಯುಗದಲ್ಲಿ ತಮ್ಮ ಮಕ್ಕಳನ್ನು ಶಾಲೆಗೇ ಸೇರಿಸುವುದೂ ಸುಲಭದ ಮಾತಲ್ಲ. ಡೊನೆಶನ್ ಹಾವಳಿ ಒಂದು ಕಡೆಯಾದರೆ ಆ ಶಾಲೆ ಉತ್ತಮ ಹೌದೋ-ಅಲ್ಲವೋ? ಕನ್ನಡ ಶಾಲೆಗೇ ಮಗನನ್ನು ಸೇರಿಸಿದರೆ ತನ್ನ ಘನತೆಗೆ ಏನಾಗುವುದೋ? ಮನೆಯ ಪಕ್ಕದ ಶಾಲೆಯಲ್ಲಿ ಪ್ರವೇಶ ಸಿಗುವುದೋ-ಇಲ್ಲವೋ? ಒಂದುವೇಳೆ ನೆಚ್ಚಿನ ಶಾಲೆಯಲ್ಲಿ ಪ್ರವೇಶ ಸಿಕ್ಕಿಲ್ಲವಾದರೆ ಹೇಗೆ? ಹೀಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ.
ಮುಗ್ಧ ಮನಸ್ಸಿನ ಮಕ್ಕಳ ಮನದಲ್ಲೂ ಸಹ ನೂರಾರು ಪ್ರಶ್ನೆಗಳು ಎದ್ದೇಳುತ್ತವೆ. ಸಿಗರೇಟು-ಕುಡಿತ ಒಳ್ಳೆದಲ್ಲವೆಂದು ಹೇಳಿ ಮಕ್ಕಳ ಎದಿರೇ ಕುಡಿಯುವ ತಂದೆ, ಕಳ್ಳತನ ಒಳ್ಳೆಯದಲ್ಲವೆಂದರೂ ಏನಾದರೂ ಕದ್ದು ತಂದಾಗ ಪ್ರೋತ್ಸಾಹಿಸುವ ತಾಯಿ, ಸುಳ್ಳು ಹೇಳಬಾರದೆಂದು ಸುಳ್ಳಲ್ಲೇ ಮನೆ ಕಟ್ಟುವ ಗುರು, ಎಷ್ಟು ಉತ್ತಮ ಅಂಕವನ್ನು ಪಡೆದರೂ ಇತರ ಸಹಪಾಟಿಗಳೊಂದಿಗೆ ತುಲನೆ ಮಾಡಿ ಸಿಗುವ ಮೂದಲಿಕೆ...... ಇವುಗಳನೆಲ್ಲ ಕಂಡ ಸ್ವಚ್ಚ ಮನಸ್ಸಿಗೆ ಯಾವುದು ಸರಿ? ಯಾವುದು ಸುಳ್ಳು ಎಂಬ ಸಂಶಯ ಬಂದೆ ಬರುತ್ತದೆ.
ಉನ್ನತ ಶಿಕ್ಷಣದ ನಿರ್ಧಾರವೂ ಕೂಡ ಗಲಿಬಿಲಿಯಿಂದ ಕೂಡಿದ್ದಾಗಿದೆ. ಯಾವ ಶಿಕ್ಷಣ ಉತ್ತಮ? ಯಾವುದರಲ್ಲಿ ಅಧಿಕ ಗಳಿಕೆ? ಸ್ನೇಹಿತ ಯಾವ ಕೋರ್ಸನ್ನು ಆಯ್ಕೆ ಮಾಡಿದ್ದಾನೆ? ತಂದೆ ತಾಯಿಗಳು ಶಿಕ್ಷಣದ ಖರ್ಚನ್ನು ಹೊರಲು ತಯಾರಿದ್ದಾರೋ? ಇಲ್ಲವಾದರೆ ಗತಿಯೇನು? ಯಾವ ಬ್ಯಾಂಕಿಗೆ ಮೊರೆ ಹೋಗಬಹುದು? ಸೀಟೇ ಸಿಕ್ಕಿಲ್ಲವಾದರೆ ಮುಂದಿನ ಗತಿಯೇನು?...ಹೀಗೆ ಪ್ರಶ್ನೆಗಳ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಇನ್ನು ಉದ್ಯೋಗ ಹುಡುಕುವುದಂತೂ ಗೊಂದಲದ ಗೂಡೇ ಆಗಿದೆ. ಉದ್ಯೋಗವನ್ನು ಪುರುಷ ಲಕ್ಷಣವೆಂದಿದ್ದಾರೆ. ಆದರೆ ಇಂದು ಸ್ತ್ರೀ ಲಕ್ಷಣದಲ್ಲೂ ಉದ್ಯೋಗ ಸೇರ್ಪಡೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಸಿಗುವುದೋ-ಇಲ್ಲವೋ? ಸಿಕ್ಕಿದರೆ ನೆಚ್ಚಿನ ಕಂಪೆನಿಯಲ್ಲಿ ಸಿಕ್ಕುವುದೋ?ಎಷ್ಟು ಸಂಬಳ ಸಿಕ್ಕಬಹುದು? ಸಿಕ್ಕಿಲ್ಲವೆನ್ದದಾದರೆ ಏನು ಮಾಡುವುದು? ಹೀಗೆ ಯೋಚನೆಯ ಹೊಳೆಯೇ ಹರಿದು ಬಿಡುತ್ತದೆ. ಏನೋ ಮಾಡಿ ಹೇಗೋ ಸರಕಾರೀ ವಲಯದಲ್ಲಿ ಅಥವಾ ಖಾಸಗಿ ಕಂಪೆನಿಯಲ್ಲಿ ಕೆಲಸ ಸಿಗುತ್ತದೆಂದು ತಿಳಿದುಕೊಳ್ಳೋಣ. ಆದರೂ ನಮ್ಮ ಪ್ರಶ್ನೆಗಳ ಗೂಡು ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಬಾಸನ್ನು ಹೇಗೆ ಖುಷಿ ಪಡಿಸುವುದು? ಹೇಗೆ ಭಡ್ತಿ ಪಡೆಯುವುದು? ಗಳಿಕೆಯನ್ನು ಏರಿಸುವುದು ಹೇಗೆ? ಲಂಚ ಪಡೆಯಲು ಏನಾದರು ಅವಕಾಶವಿದೆಯಾ? ಲಂಚ ಪಡೆದುಕೊಳ್ಳುವಾಗ ಸಿಕ್ಕಿಬಿದ್ದರೇನು ಗತಿ? ಜೈಲಿನಿಂದ ಹೊರಬರುವ ಪರಿಯೇನು? ..ಹೀಗೆ ಮನದಲ್ಲಿ ಹಲವಾರು ಪ್ರಶ್ನಾರ್ಥಕ ಚಿಹ್ನೆಗಳು.
ವಿವಾಹ ಸ್ವರ್ಗದಲ್ಲಿ ನಿಸ್ಚ್ಯವಾಗುವುದಂತೆ. ಅದರೂ ಈ ಭೂಮಿಯಲ್ಲಿ ವಿವಾಹವಾಗುವ ನಿರ್ಧಾರ ತೆಗೆಯುವ ಮೊದಲೂ ಕೂಡ ಹಲವಾರು ದ್ವಂದ್ವಗಳನ್ನು ದಾಟಿಯೇ ಬರಬೇಕು. ಹಿರಿಯರು ನಿಶ್ಚಯಿಸಿದ ಮದುವೆಯಾದರೆ ಓಕೆ.. ಇಲ್ಲ ಪ್ರೆಮವಿವಾಹವಾದರೆ ಅದನ್ನು ಹೆತ್ತವರು ಸ್ವೀಕರಿಸುವರೋ? ಇಲ್ಲವಾದರೆ ಮುಂದೇನು? ಮದುವೆಗೆ ಒಟ್ಟು ಎಷ್ಟು ಖರ್ಚಾಗಬಹುದು? ಹಣ ಹೇಗೆ ಒಟ್ಟು ಗೂಡಿಸಬಹುದು? ಮದುವೆಯಲ್ಲಿ ಎಷ್ಟು ಉಡುಗೊರೆಗಳು ಸಿಕ್ಕಬಹುದು? ಬಂದಂತಹ ಹೆಣ್ಣು ಮನೆ ಬೆಳಗುವಳೋ? ಇಲ್ಲ ಸುಡು ವಳೋ? ಎಂಬ ಸಂದೇಹ ಮನದಲ್ಲಿ. ಈ ಎಲ್ಲ ಕಷ್ಟವನ್ನು ತಿಳಿದೇ ನಮ್ಮ ಹಿರಿಯರು ಹೇಳಿರಬೇಕು, 'ಮನೆ ಕಟ್ಟಿ ನೋಡು, ಮಾಡುವೆ ಮಾಡಿ ನೋಡು"
ಮನಸ್ಸಿನ ದ್ವಂದ್ವದ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಮುಗಿಯದ ಅಧ್ಯಾಯ.ಜೀವನದ ಪ್ರಮುಖ ಹಂತಗಳಲ್ಲಿ ನಾವು ಹೇಗೆ ತುಮುಲಗಳಿಗೆ ಒಳಗಾಗುತ್ತೆವೆಯೋ ಹಾಗೆಯೇ ಪ್ರತಿ ದಿನ, ಪ್ರತಿ ನಿಮಿಷ, ಚಿಕ್ಕ-ಪುಟ್ಟ ವಿಷಯಕ್ಕೂ ನಾವು ಗೊಂದಲಕ್ಕೊಳಗಾಗುತ್ತೇವೆ.ನಮ್ಮ ಹುಚ್ಚು ಮನಸ್ಸು, ಫಲ-ಪ್ರತಿಫಲ, ಲಾಭ-ನಷ್ಟ ಗಳ ಬಗ್ಗೆ ಲೆಕ್ಕ ಹಾಕುತ್ತಲೇ ಇರುತ್ತದೆ. ದ್ವಂದ್ವಗಲಿಗೊಳಗಾಗುವ ನಮ್ಮ ಮನಸ್ಸಿಗೆ, ಬುದ್ಧಿಗೆ ನಿರ್ಧಾರವನ್ನು ತೆಗೆದು ಕೊಳ್ಳುವ ಶಕ್ತಿಯನ್ನೂ ಆ ಪರಮಾತ್ಮ ನಮಗೆ ನೀಡಿದ್ದಾನೆ. ಇಲ್ಲವಾದರೆ ಈ ಜಗತ್ತೇ ಒಂದು ಹುಚ್ಚರ ಸಂತೆಯಾಗಿ ಬಿಡುತಿತ್ತು. ಸಮಯಕ್ಕನುಗುಣವಾಗಿ ಏನೋ ನಿರ್ಧಾರವನ್ನು ತೆಗೆದುಕೊಂಡ ನಾವು ಜೀವನವನ್ನು ಸಮತೂಗಿಸುತ್ತಿದ್ದೇವೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ದ್ವಂದ್ವಕ್ಕೊಳಗಾದವರೇ ಹಾಗು ಒಳಗಾಗುತ್ತಿರುವವರೇ. ಆದರೂ ಯಾರು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೋ ಅವರು ಜಯವನ್ನು ಪಡೆಯುತ್ತಾರೆ.ನಿರ್ಧಾರವನ್ನು ತೆಗೆದುಕೊಲ್ಲದವರು ಅಥವಾ ತಪ್ಪು ನಿರ್ಧಾರ ಕೈಗೆತ್ತಿ ಕೊಳ್ಳುವವರು ಸೋಲನ್ನು ಅನುಭವಿಸುತ್ತಾರೆ. ಉಳಿದವರು ಹೇಗೋ ಸಮತೂಗಿಸಿಕೊಂಡು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾರೆ.ಸಮಯ,ವಸ್ತು, ವಿಷಯ, ಘಟನೆಯನ್ನು ನೋಡಿಕೊಂಡು ನಿರ್ಧಾರ ತೆಗೆಯುವುದು ಕೂಡ ಕಷ್ಟದ ಕೆಲಸವೇ ಅದರೂ ಸಹ ದ್ವಂದ್ವಗಳ ಲೋಕದಲ್ಲಿ ವಾಸಿಸುವ ನಾವು ಅದರ ವಿಶಾಲತೆಯನ್ನು ಕುಗ್ಗಿಸಲು ಪ್ರಯತ್ನಿಸೋಣ.........